ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಾರಿಯ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದಿರುವ ವಿಷಯದಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ನಿರಂತರವಾಗಿ 14 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್ ವೇಳೆ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಅವಕಾಶ ಕೊಡಬಾರದೆಂಬ ದುರುದ್ದೇಶ ಇದರಲ್ಲಿ ಇಲ್ಲ. ಬೇರೆ ರಾಜ್ಯಕ್ಕೂ ಅವಕಾಶ ಕೊಡಬೇಕೆಂಬ ಸದುದ್ದೇಶವಿದೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು.
ಕಳೆದ ವರ್ಷ ಕೂಡ ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಹೇಳಿದಾಗ ರಾಜ್ಯದ ನಮ್ಮೆಲ್ಲ ಹಿರಿಯರು ಪ್ರಯತ್ನಿಸಿದಾಗ ಅವಕಾಶ ಲಭಿಸಿತ್ತು. ಈ ಬಾರಿ ಕರ್ನಾಟಕ, ಗೋವಾ ಸೇರಿ ನಾಲ್ಕೈದು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ. ಅವಕಾಶ ಸಿಗದ ಕರ್ನಾಟಕ ಮತ್ತಿತರ ರಾಜ್ಯಗಳಿಗೆ ಎಕ್ಸಿಬಿಷನ್‍ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಇದನ್ನು ಗಮನಿಸದೆ ಈ ನಾಡಿನ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರದ್ದು. ಮೊಸಳೆ ಕಣ್ಣೀರು ಹಾಕುವುದನ್ನು ಬಿಡಿ. ಪ್ರಾಮಾಣಿಕವಾಗಿ ಎಲ್ಲ ವಿಷಯದಲ್ಲೂ ರಾಜ್ಯದ ಪರವಾಗಿ ನಿಲ್ಲಿ. ಎಲ್ಲ ವಿಷಯದಲ್ಲೂ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಇದೆ ಎಂದು ಮುಖ್ಯಮಂತ್ರಿಗಳು ಬಿಂಬಿಸುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ. ಬೇರೆ ಬೇರೆ ವಿಷಯಗಳಲ್ಲಿ ನಿಮ್ಮ ನಡವಳಿಕೆಯನ್ನು ಜನತೆ ಗಮನಿಸುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡರಿಗೆ ಈ ನಾಡಿನ ನೆಲ, ಜಲ, ಸಂಪತ್ತಿನ ಬಗ್ಗೆ ನೈಜ ಕಾಳಜಿ ಇದ್ದರೆ ಬೆಳಗಾವಿ ವಿಚಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಷಯದಲ್ಲಿ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಇದೇ ವೇಳೆ ವಿಜಯೇಂದ್ರ ಆಗ್ರಹಿಸಿದರು.
ಕನ್ನಡಪರ ಹೋರಾಟಗಾರ ನಾರಾಯಣಗೌಡರ ಕುರಿತ ಸರಕಾರದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಬಿಡುಗಡೆ ಆದೊಡನೆ ಮತ್ತೊಂದು ಕೇಸಿನಲ್ಲಿ ಒಳಗಡೆ ಹಾಕುವ ಪಿತೂರಿ ರಾಜ್ಯ ಸರ್ಕಾರದ್ದು ಎಂದು ಆಕ್ಷೇಪಿಸಿದರು.