ರಾಮ ಮಂದಿರ ನಿರ್ಮಾಣದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು: ಅಮಳ ರಾಮಚಂದ್ರ

KannadaprabhaNewsNetwork | Published : Jan 20, 2024 2:00 AM

ಸಾರಾಂಶ

ದೇವರ ಪ್ರಾಣಪ್ರತಿಷ್ಠೆಯಾದ ಬಳಿಕ ಪೂಜಾ ಕಾರ್ಯಗಳು ನಡೆದ ಬಳಿಕ ಮಂತ್ರಾಕ್ಷತೆ ನೀಡುವುದು ಸಂಪ್ರದಾಯ. ಆದರೆ ಯಾವ ಧಾರ್ಮಿಕ ಕಾರ್ಯಕ್ರಮಗಳೂ ನಡೆಯದೆ ಈ ಮಂತ್ರಾಕ್ಷತೆ ಎಲ್ಲಿಂದ ಬಂತು. ಇದು ಪಕ್ಕಾ ರಾಜಕೀಯ. ಶಾಸಕರು ಎಳೆದು ತಂದಿದ್ದಾರೆ ಎಂದು ಅವರು ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಕನ್ನಡಪ್ರಭವಾರ್ತೆ ಪುತ್ತೂರು

ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಯಾವತ್ತೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಅಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಮಾಜಿ ಪ್ರಧಾನಿಗಳಾದ ನೆಹರು ಹಾಗೂ ರಾಜೀವ ಗಾಂಧಿ. ಆದರೆ ಅವರೆಂದೂ ಅದನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ನ್ಯಾಯಾಲಯದ ತೀರ್ಪಿಗಾಗಿ ಎಲ್ಲರೂ ಕಾದಿದ್ದರು. ಇದೀಗ ಬಿಜೆಪಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ರಾಮ ಮಂದಿರ ನಿರ್ಮಾಣದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ತಿಳಿಸಿದ್ದಾರೆ.

ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಯೋಧ್ಯೆಯ ಮಂತ್ರಾಕ್ಷತೆ ಹೆಸರಲ್ಲಿ ಜನತೆಯನ್ನು ಮರುಳು ಮಾಡುವ ಹಾಗೂ ಪ್ರಾಣಪ್ರತಿಷ್ಠಾಪನೆಯ ಸಮಯದಲ್ಲಿ ತಂತ್ರಿಗಳನ್ನು ಬದಿಗಿಟ್ಟು ರಾಜಕಾರಣಿಗಳು ಗರ್ಭ ಗುಡಿ ಪ್ರವೇಶಿಸುವ ಮೂಲಕ ಹಿಂದೂ ಸಂಪ್ರದಾಯಕ್ಕೆ ಅಪಚಾರ ಮಾಡುತ್ತಿದ್ದಾರೆ. ದೇವರ ಪ್ರಾಣಪ್ರತಿಷ್ಠೆಯಾದ ಬಳಿಕ ಪೂಜಾ ಕಾರ್ಯಗಳು ನಡೆದ ಬಳಿಕ ಮಂತ್ರಾಕ್ಷತೆ ನೀಡುವುದು ಸಂಪ್ರದಾಯ. ಆದರೆ ಯಾವ ಧಾರ್ಮಿಕ ಕಾರ್ಯಕ್ರಮಗಳೂ ನಡೆಯದೆ ಈ ಮಂತ್ರಾಕ್ಷತೆ ಎಲ್ಲಿಂದ ಬಂತು. ಇದು ಪಕ್ಕಾ ರಾಜಕೀಯ. ಶಾಸಕರು ಎಳೆದು ತಂದಿದ್ದಾರೆ ಎಂದು ಅವರು ಆರೋಪಿಸಿದರು.

ಗರ್ಭಗುಡಿಗೆ ತಂತ್ರಿಗಳ ಬದಲಿಗೆ ರಾಜಕಾರಣಿಗಳು: ದೇವಮಂದಿರಗಳಲ್ಲಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠೆ ನೀಡುವುದು ತಂತ್ರಿಗಳ ಕೆಲಸ. ಆದರೆ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ಸಂದರ್ಭ ಗರ್ಭ ಗುಡಿಗೆ ಹೋಗುವುದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್, ರಾಜ್ಯಪಾಲ ಆನಂದಿ ಬೆನ್ ಪಟೇಲ್ ಮತ್ತು ಓರ್ವ ಅರ್ಚಕ. ಇದು ಶ್ರೀರಾಮನಿಗೆ ಮಾಡುವ ಅನ್ಯಾಯವಾಗಿದೆ. ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುವ ಕೃತ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಮನ ಹೆಸರಲ್ಲಿ ಮತ ಗಳಿಸುವ ಏಕೈಕ ಅಜೆಂಡಾ ಬಿಜೆಪಿಯದ್ದಾಗಿದೆ. ಇದರಿಂದ ನಿಜವಾದ ಹಿಂದೂ ವಿರೋಧಿಗಳು ಯಾರು ಎಂಬುವುದು ಸ್ಪಷ್ಟವಾಗುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು.

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಶ್ವನಾಥ ರೈ ಮಾತನಾಡಿ, ಜಾತಿ, ಧರ್ಮ, ಮತ ಪಂಥಗಳನ್ನು ಮೀರಿನಿಂತ ಮರ್ಯಾದಾ ಪುರುಷೋತ್ತಮ ಶ್ರೀರಾಮ ಈ ಮಣ್ಣಿನ ಅಸ್ಮಿತೆ. ಇಂತಹ ವ್ಯಕ್ತಿತ್ವವನ್ನು ಬಿಜೆಪಿ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಇದು ನೈಜ ರಾಮಭಕ್ತರಿಗೆ ಅಪಮಾನ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಇದ್ದರು.

Share this article