ಹುಬ್ಬಳ್ಳಿ:
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ಸಿನವರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಬೇಕು. ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಕೈ ಮುಗಿದು ಕ್ಷಮೆ ಕೇಳಿ ಬರಲಿ ಎಂದು ಹೇಳಿದರು.
ತನಿಖೆಗೇಕೆ ಹೆದರಿಕೆ?ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೇಕೆ ಹೆದರುತ್ತಾರೆ? ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಯಡಿಯೂರಪ್ಪ ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದರಾ? ಎಂದು ಜೋಶಿ ಪ್ರಶ್ನಿಸಿದರು.
ತಪ್ಪು ಮಾಡಿಲ್ಲ ಎಂದಾದರೆ ರಾಜಭವನ ಚಲೋ ಏಕೆ? ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವನು ಎರಡು ಬಾರಿ ಸಿಎಂ ಆದ ಕಾರಣಕ್ಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ರಾಜ್ಯಪಾಲರು ದಲಿತರೇ, ಅತ್ಯಂತ ಹಿಂದುಳಿದ ವರ್ಗದಿಂದ ಬಂದವರೇ ಆಗಿದ್ದಾರೆ. ಆಗ ಅವರನ್ನು ಹೊಗಳುತ್ತಿದ್ದ ಸಿಎಂ, ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರನ್ನು ಬೆದರಿಸುವುದೇಕೆ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲವೆಂದು ಆರೋಪಿಸಿದರು.
ಎನ್‌ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ ಓಡೋಡಿ ಹೋಗುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ನೋಡಲಿ. ಆಡಳಿತ, ಅಭಿವೃದ್ಧಿ ಏನಾಗಿದೆ? ಎಂಬುದನ್ನು ಎಂದರು.