ಸಿಎಂಗೆ ನೈತಿಕ ಬೆಂಬಲ ಸೂಚಿಸಿ ಕಾಂಗ್ರೆಸ್‌ ಪ್ರತಿಜ್ಞಾವಿಧಿ

KannadaprabhaNewsNetwork |  
Published : Sep 27, 2024, 01:25 AM IST
ಪೊಟೋ: 26ಎಸ್‌ಎಂಜಿಕೆಪಿ03ಶಿವಮೊಗ್ಗದಲ್ಲಿ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಬಳಿ ಗುರುವಾರ ಬಿಜೆಪಿ -ಜೆಡಿಎಸ್ ಷಡ್ಯಂತ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಬಳಿ ಗುರುವಾರ ಬಿಜೆಪಿ -ಜೆಡಿಎಸ್ ಷಡ್ಯಂತ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನೈತಿಕ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಬಿಜೆಪಿ -ಜೆಡಿಎಸ್ ಷಡ್ಯಂತ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಗಾಂಧಿಪಾರ್ಕ್‌ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಸಿದ್ಧರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಅವರು ನಮ್ಮ ಹೆಮ್ಮೆಯ ನಾಯಕ. ಅವರೊಂದಿಗೆ ನಾವಿದ್ದೇವೆ. ಇದು ಬಿಜೆಪಿ ಯವರ ಕುತಂತ್ರವಷ್ಟೇ. ಚುನಾಯಿತ ಸರ್ಕಾರವನ್ನು ಬೀಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಬಿಜೆಪಿಗರ ಷಡ್ಯಂತ್ರಕ್ಕೆ ನಾವು ಹೆದರವುದೂ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಸಿದ್ಧರಾಮಯ್ಯ ಅವರು ಅಪರಾಧಿ ಅಲ್ಲ. ತನಿಖೆ ಮಾಡಿ ಎಂದು ನ್ಯಾಯಾಲಯ ಹೇಳಿದೆ. ಅದನ್ನೇ ಸಾಧನೆ ಎಂದು ಬಿಜೆಪಿಯವರು ಕುಣಿದಾಡುತ್ತಿದ್ದಾರೆ. ನೈತಿಕತೆ ಇಲ್ಲದ ಬಿಜೆಪಿಯವರು ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದಾರೆ. ಬಿಜೆಪಿಯ ನಾಲ್ವರು ಮುಖ್ಯಮಂತ್ರಿಗಳ ಪೈಕಿ ಮೂವರು ಆರೋಪ ಹೊತ್ತಿದ್ದಾರೆ. ಕೆಲವರು ಬೇಲ್ ಮೇಲೆ ಹೊರಗಿದ್ದಾರೆ. ಎಫ್‌ಐಆರ್ ಕೂಡ ಹಾಕಲಾಗಿದೆ. ಇಂತಹ ನೈತಿಕತೆ ಇಲ್ಲದವರು ನೈತಿಕ ಪಾಠ ಹೇಳುತ್ತಿದ್ದಾರೆ ಎಂದರು.

ಏಡ್ಸ್ ಹರಡುವ ಶಾಸಕ, ಹೆಂಗಸರಷ್ಟೇ ಅಲ್ಲ ಗಂಡಸರ ಮೇಲೆಯೂ ಅತ್ಯಾಚಾರ ಮಾಡುವವರು, ಇದಕ್ಕಿಂತಲೂ ಹೆಚ್ಚಾಗಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದವರು ಬಿಜೆಪಿಯಲ್ಲಿದ್ದಾರೆ. ಕೇಂದ್ರ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೇಲ್ ಮೇಲೆ ಹೊರಗಿದ್ದಾರೆ. ಇವರಿಗೆಲ್ಲ ಯಾವ ನೈತಿಕತೆ ಇದೆಯೇ? ಶಿವಮೊಗ್ಗ ದಲ್ಲಿ ರಾಶಿ ರಾಶಿ ಬೇನಾಮಿ ಆಸ್ತಿ ಮಾಡಿದವರಿದ್ದಾರೆ. ರಾಜೀನಾಮೆ ಕೇಳುವ ಬಿಜೆಪಿ ರಾಜ್ಯಾಧ್ಯಕ್ಷ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಹರಿಹಾಯ್ದರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ರಾಜ್ಯಪಾಲರು ಬಿಜೆಪಿಯ ಪ್ರತಿರೂಪವಾಗಿದ್ದಾರೆ. ಸಂಘ ಪರಿವಾರದ ಸದಸ್ಯರಂತೆ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಹೆದರುವುದಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಶಕ್ತಿ ಕುಂದಿಸಲು ಸಾಧ್ಯವಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲ. ಅವರೇ ಇಂದಿಗೂ ನಮ್ಮ ಮುಖ್ಯಮಂತ್ರಿ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಕಳಂಕರಹಿತರಾಗಿದ್ದಾರೆ. ಅವರಿಗೆ ಕಪ್ಪು ಚುಕ್ಕೆ ತರಲು ಮಾಡಿರುವ ಹುನ್ನಾರವಿದು. ಇಂತಹ ಹುನ್ನಾರಗಳನ್ನು ಬಿಜೆಪಿಯ ವರು ಮಾಡುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಅವರು ತನಿಖೆಯನ್ನು ಎದುರಿಸಲು ಸಿದ್ಧರಿದ್ದಾರೆ. ಅವರು ಖಂಡಿತ ಕಳಂಕರಹಿತರಾಗಿ ಹೊರಬರುತ್ತಾರೆ. ಇಡೀ ಕಾಂಗ್ರೆಸ್ ಕಾರ್ಯಕರ್ತರು ಅವರೊಂದಿಗಿದ್ದಾರೆ. ಅವರಿಗೆ ರಕ್ಷಣೆ ಸಿಕ್ಕೇ ಸಿಗುತ್ತದೆ. ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಬಿ.ಕೆ.ಮೋಹನ್, ಎಚ್.ಪಿ.ಗಿರೀಶ್, ಎಚ್.ಎಸ್.ಸುಂದರೇಶ್ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಎಸ್.ಪಿ. ಶೇಷಾದ್ರಿ, ವೈ.ಹೆಚ್. ನಾಗರಾಜ್. ಪಿ.ಎಸ್. ಗಿರೀಶ್ ರಾವ್, ಎಸ್.ಟಿ. ಚಂದ್ರಶೇಖರ್, ಶರತ್ ಮರಿಯಪ್ಪ, ಕಲೀಂ ಪಾಶ, ಮಧುಸೂದನ್, ಚೇತನ್ ಗೌಡ, ವಿಶ್ವನಾಥ್ ಕಾಶಿ, ಶಿ.ಜು. ಪಾಶ, ಜಿ. ಪದ್ಮನಾಭ್, ಶಮೀನ್ ಭಾನು, ಅಫ್ರಿದಿ, ಸ್ಟೆಲಾ ಮಾರ್ಟಿನ್,ಯಮುನಾ ರಂಗೇಗೌಡ, ಸುವರ್ಣಾ ನಾಗರಾಜ್,ನಾಜೀಮಾ, ರೇಷ್ಮಾ, ವಿಜಯ ಲಕ್ಷ್ಮಿ, ಕವಿತಾ, ನಿತಿನ್,ಕುಮರೇಶ್, ಲೋಕೇಶ್, ರಾಜಶೇಖರ್ ಆರ್,ಹಾಡೋನಹಳ್ಳಿ ಜಗದೀಶ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!