ಹಾವೇರಿ:ಮನ್ರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯಲು ಹಾಗೂ ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜೀ ಯೋಜನೆ ಜಾರಿಗೆ ತಂದಿದೆ. ಕಾಂಗ್ರೆಸ್‌ನವರಿಗೆ ಹಣ ಲೂಟಿ ಮಾಡಲಿಕ್ಕೆ ಆಸ್ಪದ ಸಿಗಲಾರದಕ್ಕೆ ಯೋಜನೆ ಬಗ್ಗೆ ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮನ್ರೇಗಾ ಯೋಜನೆ ಬದಲಾಯಿಸಿದ್ದಕ್ಕೆ ಕಾಂಗ್ರೆಸ್‌ನವರಿಗೆ ಗಾಂಧಿ ಮೇಲೆ ಬಹಳ ಪ್ರೀತಿ ಬಂದಿದೆ. ಯುಪಿಎ ಸರ್ಕಾರ ಮೊದಲು ನರೇಗಾ ಯೋಜನೆ ಅಷ್ಟೇ ಜಾರಿಗೊಳಿಸಿತ್ತು. ಬಳಿಕ ಸೋನಿಯಾಗಾಂಧಿ ಕುಟುಂಬ ಮೆಚ್ಚಿಸಲು ಮನ್ರೇಗಾ ಎಂದು ಹೆಸರಿಟ್ಟರು. ಅದರಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ, ಲೂಟಿ ನಡೆದಿದೆ. 2013ರಲ್ಲಿ 4ಲಕ್ಷ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ 11 ಲಕ್ಷ ಕೋಟಿ ರು. ಲೂಟಿ ಮಾಡಲಾಗಿದ್ದು, ಇದು ಸಿಐಜಿ ವರದಿಯಲ್ಲಿ ಬಹಿರಂಗಗೊಂಡಿದೆ ಎಂದರು.ಜನರಿಗೆ ಯೋಜನೆಯ ಲಾಭ ಸಿಗಬೇಕೆಂದು ಬಿಜೆಪಿ ವಿಬಿ ಜಿ ರಾಮ್ ಜಿ ಯೋಜನೆಯಾಗಿ ಬದಲಾವಣೆ ಮಾಡಿದೆ. ಇದರಲ್ಲಿ ಎಐ ಟ್ರ್ಯಾಕಿಂಗ್, ಜಿಪಿಎಸ್ ತಂತ್ರಜ್ಞಾನ ಅಳವಡಿಲಾಗಿದೆ. ಹಣ ಲೂಟಿ ಹೊಡೆಯುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಹಾಗಾಗಿ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 25 ದಿನ ಸೃಜನೆ ಮಾಡಿದೆ. ಬಿಜೆಪಿ ಅಧಿಕಾರ ಬಂದ ಬಳಿಕ ನರೇಗಾ ಯೋಜನೆಗೆ 8.53 ಲಕ್ಷ ಕೋಟಿ ರು. ಅನುದಾನ ಬಂದಿದೆ. ಸಿಎಂ, ಡಿಸಿಎಂ ಸುಖಾಸುಮ್ಮನೆ ಜನರಲ್ಲಿ ತಪ್ಪು ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಜಿ ರಾಮ್ ಜಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ 60ಃ40 ಅನುಪಾತದಲ್ಲಿ ಅನುದಾನ ಒದಗಿಸಬೇಕು. ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ರಾಮ್ ಎಂಬ ಹೆಸರು ಬಂದಿರುವ ಏಕೈಕ ಕಾರಣಕ್ಕೆ ಕಾಂಗ್ರೆಸ್‌ನವರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಇನ್ನೂ ನೆಹರು, ಇಂದಿರಾ ಕಾಲದ ಯೋಜನೆಗಳಿಗೇ ಜೋತು ಬಿದ್ದಿದ್ದಾರೆ. ಕಾಲ ಬದಲಾದಂತೆ ಹೊಸ ರೂಪ ನೀಡಿ ಜನರಿಗೆ ಅನುಕೂಲ ಮಾಡುವುದನ್ನು ಒಪ್ಪುವುದಿಲ್ಲ. ಬಿಜೆಪಿ ಮುಂದಕ್ಕೆ ಹೋಗುತ್ತಿದ್ದರೆ, ಕಾಂಗ್ರೆಸ್ ಹಿಂದಕ್ಕೆ ಎಳೆಯುತ್ತದೆ ಎಂದು ಲೇವಡಿ ಮಾಡಿದರು. ಸರ್ಕಾರ ಸತ್ತು ಹೋಗಿದೆ:ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ನವೆಂಬರ್ ಕ್ರಾಂತಿ, ಸಂಕ್ರಾಂತಿ ಎಂದು ಅಧಿಕಾರಕ್ಕಾಗಿ ಕಾಲಹರಣ ಮಾಡುತ್ತಿದ್ದಾರೆ ವಿನಃ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬೆಂಗಳೂರಲ್ಲಿ ಬಾಂಗ್ಲಾದೇಶ ಜನರನ್ನು ಹೊರ ಹಾಕುವ ಕೆಲಸವನ್ನು ಸರ್ಕಾರ ಮಾಡಬೇಕು. ಮಲೆಯಾಳಂ ಭಾಷಾ ಮಸೂದೆ ಅಂಗೀಕಾರವನ್ನು ನಾವು ವಿರೋಧಿಸುತ್ತೇವೆ. ಕೇರಳ ಚುನಾವಣೆಗೋಸ್ಕರ ಈ ಕೆಲಸ ಮಾಡುತ್ತಿರುವುದು ಸರಿಯಲ್ಲ, ಅಂಗೀಕಾರ ಮಾಡಿದರೆ ನಾವು ಕೇಂದ್ರಕ್ಕೆ ಪತ್ರ ಬರೆದು ಕಾನೂನು ಕ್ರಮ ಕೈಗೊಳ್ಳಲು ವಿನಂತಿಸುತ್ತೇವೆ ಎಂದರು.ಸ್ಪಂದನೆ ಇಲ್ಲ: ಅಕ್ರಮ ಚಟುವಟಿಕೆ ಬಗ್ಗೆ ಮಟ್ಕಾ, ಮದ್ಯ ಮಾರಾಟ, ಜೂಜಾಟ ಬಗ್ಗೆ ಗೃಹ ಇಲಾಖೆಗೆ ಮೂರು ಬಾರಿ ಪತ್ರ ಬರೆದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಸ್ಪಿ, ಡಿಸಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಹಿರೇಕೆರೂರ, ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಮಟ್ಕಾ ದಂಧೆ ನಡೆಸೋರೆ ಆಡಳಿತ ನಡೆಸುತ್ತಿದ್ದಾರೆ. ಗೃಹ ಮಂತ್ರಿಗಳಿಗೆ ಪತ್ರಬರೆದರೂ ಪ್ರತಿಕ್ರಿಯೆ ಇಲ್ಲ, ಬೇಲಿಯೇ ಎದ್ದು ಹೊಲ ಮೇಯ್ದೆರೆ ಏನು ಮಾಡೋದು ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ಶೋಭಾ ನಿಸ್ಸೀಮಗೌಡ್ರ, ಗವಿಸಿದ್ದಪ್ಪ ದ್ಯಾಮಣ್ಣನವರ, ಸಿದ್ದರಾಜ ಕಲಕೋಟಿ, ನಾಗೇಂದ್ರ ಕಟಕೊಳ, ನಂಜುಂಡೇಶ ಕಳ್ಳೆರ, ಸುರೇಶ ಹೊಸಮನಿ ಇತರರು ಇದ್ದರು.ಟೇಪ್ ಕತ್ತರಿಸುವ ಎಂಎಲ್‌ಎ:ನಮ್ಮ ಕ್ಷೇತ್ರದಲ್ಲಿ ಹಿಂದೆ ನಾವು ತಂದಿದ್ದ ಯೋಜನೆಗಳನ್ನು ಈಗಿನ ಶಾಸಕರು ಕತ್ತರಿ ಹಿಡಿದು ಟೇಪ್ ಕಟ್ ಮಾಡುತ್ತಾ ಹೊರಟಿದ್ದಾರೆ. ಹಾಗಾಗಿ ಅವರನ್ನು ಖಾಲಿ ಎಂಎಲ್‌ಎ ಎನ್ನುವ ಬದಲು ಕತ್ತರಿ ಎಂಎಲ್‌ಎ ಅಂತಾ ಕರೆಯಬಹುದು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವ ಯೋಜನೆಗಳೂ ಬಂದಿಲ್ಲ, ಕಾರ್ಮಿಕ ಭವನ, ಕೋಲ್ಡ್ ಸ್ಟೋರೇಜ್, ಪ್ರವಾಸಿ ಮಂದಿರ ಹೀಗೆ ಅನೇಕ ಕಾಮಗಾರಿ ನಾವು ತಂದಿದ್ದೇವೆ. ಆದರೆ ಅವರು ಈಗ ಉದ್ಘಾಟನೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಕೂಡ ಇದೇ ರೀತಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.