ರಾಗಾ ಮೇಲೆ ಎಫ್ಐಆರ್ ಖಂಡಿಸಿ ಕಾಂಗ್ರೆಸ್ ಧರಣಿ

KannadaprabhaNewsNetwork |  
Published : Sep 13, 2026, 01:30 AM IST
12ಕೆಡಿವಿಜಿ2-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಹಾಗೂ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಸಮರ್ಥ ಶಾಮನೂರು, ದಿನೇಶ ಶೆಟ್ಟಿ ಇತರರು. ...............12ಕೆಡಿವಿಜಿ3, 4-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಹಾಗೂ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಶಾಸಕ ಸಮರ್ಥ ಶಾಮನೂರು, ದಿನೇಶ ಕೆ.ಶೆಟ್ಟಿ ಇತರರು ಭಾಗವಹಿಸಿರುವುದು. | Kannada Prabha

ಸಾರಾಂಶ

ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡ ರಾಜ್ಯದಲ್ಲಿ ಈಚೆಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಮೌನ ಪ್ರತಿಭಟನಾ ಧರಣಿ ನಡೆಸಲಾಯಿತು.

- ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ್ದ ಸ್ಥಳ ಶುದ್ಧೀಕರಣಕ್ಕೆ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡ ರಾಜ್ಯದಲ್ಲಿ ಈಚೆಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಮೌನ ಪ್ರತಿಭಟನಾ ಧರಣಿ ನಡೆಸಲಾಯಿತು.

ನಗರದ ಪಾಲಿಕೆ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಡಾ. ಬಿ.ಆರ್.ಅಂಬೇಡ್ಕರ್ ವೃತ್ತವನ್ನು ತಲುಪಿಸಿ, ಅಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ ಪುತ್ಥಳಿಗೆ ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ನೇತೃತ್ವದಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

ಇದೇ ವೇಳೆ ಮಾತನಾಡಿದ ಎಲ್.ಹನುಮಂತಯ್ಯ, ಒಂದು ಕಡೆ ದೇಶವನ್ನು ವಿಶ್ವ ಗುರುವೆಂದು, ವಿಕಸಿತ ಭಾರತವೆಂಬು ಬಿಂಭಿಸುವ ಬಿಜೆಪಿ ನಾಯಕರು ಮತ್ತೊಂದು ಕಡೆ ಅಸ್ಪೃಶ್ಯತೆಯ ಮನಸ್ಥಿತಿ ಮುಂದುವರಿಸುತ್ತಿರುವುದು, ಖರ್ಗೆಯವರು ಸಭೆ ಮಾಡಿದ ಸ್ಥಳ‍ವನ್ನು ಶುದ್ಧೀಕರಿಸುವಂತಹ ಘಟನೆಗಳಿಗೆ ಅವಕಾಶ ನೀಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ದೇಶದ ಅತ್ಯುನ್ನತ ನಾಯಕರೊಬ್ಬರು ಸಭೆ ಮಾಡಿದ ಸ್ಥಳವನ್ನು ಗಂಜಲದಿಂದ ಶುದ್ಧೀಕರಿಸುವಂತಹ ಕೃತ್ಯ ನಡೆದಿರುವುದು ಅಸ್ಪೃಶ್ಯತೆಯ ಮನಸ್ಥಿತಿ ಇನ್ನೂ ದೇಶದಲ್ಲಿ ಜೀವಂತ ಇರುವುದಕ್ಕೆ ಸಾಕ್ಷಿಯಾಗಿದೆ. ಇಂತಹ ಕೃತ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಭಾರತದ ಸಂವಿಧಾನದ ವಿಧಿ 17 ಅಸ್ಪೃಶ್ಯತೆಯನ್ನು ಸಂಪೂರ್ಣ ನಿಷೇಧಿಸಿದೆ. ಅಸ್ಪೃಶ್ಯತೆಯ ಮನೋಭಾವ ಪ್ರತಿಬಿಂಬಿಸುವ ಯಾವುದೇ ಕೃತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉತ್ತರಾಖಂಡ್ ಘಟನೆ ಬಳಿಕವೂ ತಪ್ಪಿತಸ್ಥರ ವಿರುದ್ಧ ಅಲ್ಲಿನ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ, ವಿಳಂಬ ಧೋರಣೆ ಅನುಸರಿಸುತ್ತಿದೆ. ಎಫ್ಐಆರ್‌ ದಾಖಲಿಸುವಲ್ಲೂ ಮೀನಾ-ಮೇಷ ಎಣಿಸುತ್ತಿದ್ದು, ಇದುವರೆಗೂ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಇದು ಅಲ್ಲಿನ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಉತ್ತರಾಖಂಡದಲ್ಲಿ ಅದೇ ಜಾಗಕ್ಕೆ ಭೇಟಿ ನೀಡಿದರೆಂಬ ಕಾರಣಕ್ಕೆ ಎಫ್ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ ಸಂಗತಿ ಎಂದು ಅವರು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಾಖಂಡ ಸರ್ಕಾರದ ಪ್ರಮುಖರು ಬಹಿರಂಗವಾಗಿ ಘಟನೆ ಬಗ್ಗೆ ಖಂಡಿಸಿಲ್ಲ. ಸಂವಿಧಾನ ಮತ್ತು ಸಮಾನತೆಯ ಮೌಲ್ಯಗಳಲ್ಲಿ ನಂಬಿಕೆ ಇರುವ ಸರ್ಕಾರವಾಗಿದ್ದರೆ ಇಂತಹ ಕೃತ್ಯ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಅಸ್ಪೃಶ್ಯತೆ ಆಚರಣೆಗೆ ಯಾವುದೇ ರೀತಿ ಅವಕಾಶ ನೀಡಬಾರದು. ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ. ಈ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಲಿ ಎಂದು ಹನುಮಂತಯ್ಯ ತಾಕೀತು ಮಾಡಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಉತ್ತರಾಖಂಡದ ಘಟನೆ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಅಲ್ಲಿ ಅಸ್ಪೃಶ್ಯತೆ ಆಚರಿಸಿದವರನ್ನು ಇನ್ನೂ ಏಕೆ ಬಂಧಿಸಿಲ್ಲ? ಆ ದುಷ್ಕರ್ಮಿಗಳಿಗೆ ಕೇಂದ್ರ ಗೃಹ ಸಚಿವಾಲಯದ ರಕ್ಷಣೆ ಸಿಕ್ಕಿದೆಯೇ? ಸಂವಿಧಾನದ 17ನೇ ವಿಧಿ ಉಲ್ಲಂಘನೆ ಬಗ್ಗೆ ಧ್ವನಿ ಎತ್ತಿದ, ಸಂವಿಧಾನದ ಪರನಿಂತಿದ್ದು ರಾಹುಲ್ ಗಾಂಧಿ ಮಾಡಿದ ಅಪರಾಧವೇ? ಮಲ್ಲಿಕಾರ್ಜುನ ಖರ್ಗೆಗೆ ಆದ ಬಹಿರಂಗ ಅವಮಾನಕ್ಕೆ ಪ್ರಧಾನಿ ಮೋದಿ ದೇಶದ ಶೋಷಿತ ವರ್ಗಗಳ ಮುಂದೆ ಬಹಿರಂಗ ಕ್ಷಮೆ ಕೇಳುವ ಧೈರ್ಯ ತೋರಲಿ ಎಂದರು.

ಶಾಸಕ ಸಮರ್ಥ ಎಂ.ಶಾಮನೂರು, ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್‌, ಅನಿತಾ ಬಾಯಿ, ಕೆ.ಪಿ.ರಾಜೇಶ್ವರಿ, ಮಂಜುಳಮ್ಮ, ಮೊಹಿನುದ್ದೀನ್, ಎ.ನಾಗರಾಜ, ಮಂಜುನಾಥ ಗಡಿಗುಡಾಳ್, ಎಸ್.ಮಲ್ಲಿಕಾರ್ಜುನ, ಎಚ್.ಜೆ.ಮೈನುದ್ದೀನ್, ಡೋಲಿ ಚಂದ್ರು, ಎಲ್.ಎಚ್.ಸಾಗರ್‌, ಜಿ.ರಾಕೇಶ ಗಾಂಧಿ ನಗರ, ರಮೇಶ ಗಾಂಧಿನಗರ, ಮುಜಾಹಿದ್ ಪಾಷ, ದಾಕ್ಷಾಯಣಮ್ಮ, ಸರ್ವಮಂಗಳ, ಎಸ್.ಕೆ.ಪ್ರವೀಣಕುಮಾರ, ನಿಟುವಳ್ಳಿ ಪ್ರವೀಣ ಇತರರು ಇದ್ದರು.

- - -

-12ಕೆಡಿವಿಜಿ2: ದಾವಣಗೆರೆಯಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಹಾಗೂ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಾಸಕ ಸಮರ್ಥ ಶಾಮನೂರು, ದಿನೇಶ ಶೆಟ್ಟಿ ಇತರರು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದು: ಡಾ.ಕುಮಾರ
ಹಿರೇಮಠ ಸಂಸ್ಥಾನ ಆಧ್ಯಾತ್ಮ ಸಂಸ್ಕಾರದ ನೆಲೆಗಟ್ಟು: ಹಾವಗಿ ಲಿಂಗೇಶ್ವರಶ್ರೀ