ಹುಬ್ಬಳ್ಳಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಶಿಗ್ಗಾಂವಿ- ಸವಣೂರು ಉಪಚುನಾವಣೆ ಕಣ ಕೂಡ ರಂಗೇರಿದೆ. ಬಿಜೆಪಿಯನ್ನು ಹೇಗೆ ಸೋಲಿಸಬೇಕು ಎಂಬುದರ ಬಗ್ಗೆ ತಂತ್ರಗಾರಿಕೆಯನ್ನು ರೂಪಿಸಲು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಭೆ ನಡೆಸಿದೆ. ಹೇಗಾದರೂ ಮಾಡಿ ಈ ಸಲ ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಬೇಕು ಎಂದು ಯೋಜನೆ ರೂಪಿಸಲಾಗಿದೆ.
25 ವರ್ಷದಿಂದ ಕಾಂಗ್ರೆಸ್ ಗೆದ್ದಿಲ್ಲ. ಆದರೆ, ಈ ಸಲ ಸರ್ಕಾರವೂ ನಮ್ಮದೇ ಇದೆ. ಗ್ಯಾರಂಟಿ ಯೋಜನೆಗಳಿವೆ. ಈ ಸಲ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಲೇಬೇಕು ಎಂಬುದು ಕಾಂಗ್ರೆಸ್ ಮುಖಂಡರು ಶಪಥ ಮಾಡಿದರು. 6 ಜಿಪಂ, 3 ಪುರಸಭೆಗಳಿಗೆ ಪ್ರತ್ಯೇಕವಾಗಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಮತದಾರರನ್ನು ಸೆಳೆಯಲು ಯಾವ ರೀತಿ ಪ್ರಚಾರ ಮಾಡಬೇಕು ಎಂಬುದರ ಕುರಿತು ರಣತಂತ್ರವನ್ನು ಕಾಂಗ್ರೆಸ್ ರಚಿಸಿದೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಐವರು ಸಚಿವರು, 10ಕ್ಕೂ ಹೆಚ್ಚು ಶಾಸಕರು, ಎಂಎಲ್‌ಸಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದ ಸಭೆಯಲ್ಲಿ ಹಿಂದೆ ಕಾಂಗ್ರೆಸ್ ವಶದಲ್ಲಿದ್ದ ಶಿಗ್ಗಾಂವಿ- ಸವಣೂರು ಕ್ಷೇತ್ರ ಯಾವಾಗಿನಿಂದ ಕೈ ತಪ್ಪಿದೆ. ಮತ್ತೆ ಹೇಗೆ ಅದನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮುಖಂಡರು ಪರಸ್ಪರ ಸಮಾಲೋಚಿಸಿದರು.ಚುನಾವಣಾ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ, ಸಚಿವರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ, ಉಪಸಭಾಪತಿ ರುದ್ರಪ್ಪ ಲಮಾಣಿ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಸೇರಿದಂತೆ ಹತ್ತಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿ ಮಹತ್ವದ ವಿಷಯಗಳ ಚರ್ಚೆ ಮಾಡಿದ್ದಾರೆ.
ವಕ್ಫ್ ವಿವಾದ, ಮುಡಾ, ವಾಲ್ಮೀಕಿ ಸೇರಿದಂತೆ ಮತ್ತಿತರರ ವಿಷಯಗಳನ್ನೇ ಬಿಜೆಪಿ ಪ್ರಸ್ತಾಪಿಸುತ್ತದೆ. ಇದಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಬೇಕು ಎಂದು ಮುಖಂಡರಿಗೆ ಕಿವಿಮಾತು ಹೇಳಲಾಗಿದೆ ಎಂದು ತಿಳಿಸಲಾಗಿದೆ.
ಪ್ರತಿಯೊಬ್ಬರೂ ಬೂತ್ ಮಟ್ಟದಲ್ಲಿ ಮತದಾರರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಶ್ರಮಿಸಬೇಕು. ಸಚಿವರಾಗಿ, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ. ಇದೀಗ ಅವರ ಪುತ್ರನಿಂದ ಅಭಿವೃದ್ಧಿ ಮಾಡಲು ಸಾಧ್ಯವೇ? ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮುಖಂಡರು ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂಬ ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಕಾಂಗ್ರೆಸ್ ಗೆದ್ದಿಲ್ಲ. ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕ್ಷೇತ್ರ ಗೆಲ್ಲಲೇಬೇಕೆಂದು ಎಲ್ಲಿಲ್ಲದ ತಂತ್ರ, ರಣತಂತ್ರವನ್ನು ಕೈ ನಾಯಕರು ರೂಪಿಸುತ್ತಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.!