ಕನ್ನಡಪ್ರಭ ವಾರ್ತೆ ಕಲಬುರಗಿ
ಉಭಯ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಹಾಗೂ ಸಹಾಯಕರು ಕಳೆದ 1 ವಾರದಿಂದ ನೀರಿನ ಸಮಸ್ಯೆ ಕಾಡುತ್ತಿದೆ. ತಾವು ಬಾಟಲ್ ನೀರನ್ನೇ ಬಳಸುತ್ತಿರೋದಾಗಿ ಹೇಳಿದರಲ್ಲದೆ ಅನೇಕರ ಎಮರ್ಜೆನ್ಸಿ ಶಸ್ತ್ರ ಚಿಕಿತ್ಸೆಗಳನ್ನೆಲ್ಲ ಮುಂದೂಡಿ ವೈದ್ಯರು ಹೇಳಿದ್ದಾರೆ. ನಮಗೆಲ್ಲರಿಗೂ ತೊಂದರೆ ಕಾಡುತ್ತಿದೆ ಎಂದು ಆಸ್ಪತ್ರೆಯಲ್ಲಿನ ನೀರಿನ ಹಾಹಾಕಾರದಿಂದ ತಮಗೆ ಎದುರಾಗಿರುವ ಸಮಸ್ಯೆಗಳನ್ನು ಅಶೋಕ ಮುಂದೆ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಎಂದೇ ಅರ್ಥವಾಗ್ತಿಲ್ಲ. ಇಲ್ಲಿನ ಆಸ್ಪತ್ರೆ ದುರವಸ್ಥೆ ನೋಡಿದರೆ ಈ ಸರಕಾರ ಐಸಿಯೂನಲ್ಲಂತೂ ಇದೆ ಎಂಬುದು ಖಚಿತವಾಗ್ತಿದೆ ಎಂದರು.ಜೂ.16, 17, 18 ಮೂರು ದಿನ ಮಳೆಯಿಂದಾಗಿ ರಾಡಿ ನೀರು ಬಂತೆಂದು ತುರ್ತು ಶಸ್ತ್ರ ಚಿಕಿತ್ಸೆಗಳನ್ನೇ ನಿಲ್ಲಿಸಿದ್ದಾರೆ. ಹೀಗಾದರೆ ಬಡ ರೋಗಿಗಳು ಹೋಗೋದೆಲ್ಲಿ? ಇದು ಘೋರ ಅಲಕ್ಷತನ, ಇದಕ್ಕೆ ಯಾರು ಹೊಣೆ? ತಕ್ಷಣ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಇಡೀ ಬೆಳವಣಿಗೆಯ ಸಮಗ್ರ ತನಿಖೆಗೆ ಆಗ್ರಹಿಸುವೆ, ಅಲಕ್ಷತನಕ್ಕೆ ಪಾಲಿಕೆಯ ಕಮೀಷ್ನರ್, ಜಿಲ್ಲಾಡಳಿತದ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸುವಂತೆ ಆಗ್ರಹಿಸುವೆ ಎಂದರು.
ಕಲುಷಿತ ನೀರು ಪೂರೈಕೆ, ರಾಡಿ ನೀರಿನ ಸರಬರಾಜು ಆದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಸಿಇಓ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೋದಾಗಿ ಸಿಎಂ ಹೇಳಿದ್ದರು. ಶಸ್ತ್ರ ಚಿಕಿತ್ಸೆಗಳನ್ನೇ ನಿಲ್ಲಿಸಿರುವ ಕಲಬುರಗಿಯ ಈ ಪ್ರಕರಣದಲ್ಲಿ ಯಾರ್ಯಾರ ಮೇಲೆ ಕ್ರಮವಾಗಿದೆ? ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಇಲ್ಲಿನವರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಇಲ್ಲಿನ್ನೂ ಬಂದು ನೋಡೇ ಇಲ್ಲ. ಸಿಎಂ ರಾಜಕೀಯ ಸಲಹೆಗಾರರೂ ಬಿಆರ್ ಪಾಟೀಲ್ ಕೂಬಡಾ ಇಲ್ಲಿನವರೇ, ಇಂತಹ ಘಟಾನುಘಟಿ ತ್ರಿಮೂರ್ತಿಗಳ ಜಿಲ್ಲೆಯಲ್ಲೇ ಈ ದುರವಸ್ಥೆಯಾದರೆ ಮುಂದೇನು ಗತಿ? ಎಂದರು.
ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ: ನೀರಿಲ್ಲವೆಂದು 3 ದಿನ ಚಿಕಿತ್ಸೆ ನಿಲ್ಲಿಸಿದ್ದಾರೆಂದರೆ ವೈದ್ಯರೇ ಹೇಳುವಂತೆ ಲೆಕ್ಕ ಹಾಕಿ ನೋಡಿದರೆ ಅಂದಾಜು ಕನಿಷ್ಠ ಪಕ್ಷ 900 ರೋಗಿಗಳು ಚಿಕಿತ್ಸೆ ವಂಚಿತರಾಗಿದ್ದಾರೆ, ಅವರೆಲ್ಲಿ ಹೋದರೋ ಗೊತ್ತಿಲ್ಲ, ಅವರ ಆರೋಗ್ಯ ಹೇಗಿದೆಯೋ ಗೊತ್ತಿಲ್ಲ. ಇದಕ್ಕೆಲ್ಲ ಸರ್ಕಾರವೇ ಹೊಣೆ ಎಂದ ಅಶೋಕ್, ಜಯದೇವದಂತಹ ಗೌರವ ಹೊಂದಿದ ಸಂಸ್ಥೆಯ ಗೌರವಕ್ಕೆ ಕಾಂಗ್ರೆಸ್ ಆಡಳಿತ ಮಸಿ ಬಳಿಯಿತು ಎಂದು ವಿಷಾದಿಸಿದರು.
ಮೂರು ದಿನವಾದ್ರೂ ಸಿಎಂ ಮೌನ, ಡಿಸಿಎಂ ಚನ್ನಪಟ್ಟಣದಲ್ಲಿ ಸಂಚಾರ: ಸಿಎಂ ಕಥೆ ಬಿಡಿ, ಮಂತ್ರಿಯೇ ಬಂದು ಹೋಗಿಲ್ಲ, ಡಿಸಿಎಂ ಸಾಹೇಬರೂ ಆದಾಗಲೇ ಚನ್ನಪಟ್ಟಣ ಉಪ ಚುನಾವಣೆಗೆ ಹೋಗಿಬಿಟ್ಟಿದ್ದಾರೆಂದು ಅಶೋಕ ಲೇವಡಿ ಮಾಡಿದರು. ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಅಂತ ನಾನು ಹೇಳಿದ್ರೆ ಅಶೋಕಗೆ ಬುದ್ದಿ ಕಮ್ಮಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾರಿಗೆ ಬುದ್ದಿ ಕಮ್ಮಿ ಈಗ ಗೊತ್ತಾಗಿದೆ. ನಾನೂ 5 ಬಾರಿ ಮಂತ್ರಿಯಾಗಿದ್ದೆ. ತಿಪ್ಪರಲಾಗ ಹಾಕಿದರೂ 80 ಸಾವಿರ ಕೋಟಿ ಅಭಿವೃದ್ಧಿಗೆ ಹಣ ವೆಚ್ಚ ಮಾಡಲಾಗದು. ಅಂತಹದ್ದರಲ್ಲಿ ಗ್ಯಾರಂಟಿಗಳಿಗೆ 65 ಸಾವಿರ ಕೋಟಿ ರು. ವೆಚ್ಚ ಮಾಡಿದರೆ ಅಭಿವೃದ್ಧಿ ಹೋಗಿ ಹೀಗೆ ಎಡವಟ್ಟುಗಳಗದೆ ಇನ್ನು ಆಗುತ್ತದೆ ಹೇಳಿ ಎಂದು ಪ್ರಶ್ನಿಸಿದರು.
ಕರುನಾಡಲ್ಲಿ ಇನ್ಮುಂದೆ ತೆರಿಗೆ ಪರ್ವ: ಮುದ್ರಾಂಕ ಶುಲ್ಕವಾಯ್ತು, ಮದ್ಯದ ದರವಾಯ್ತು, ತೈಲ ಬೆಲೆಯಾಯ್ತು, ಶೀಘ್ರವೇ ಬಸ್ ದರ ಹೆಚ್ಚಳವಾಗುತ್ತದೆ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ವರ್ಷದೊಳಗೇ ತೆರಿಗೆ ಪರ್ವ, ಬೆಲೆ ಏರಿಕೆ ಪರ್ವಗಳೇ ಶುರುವಾಗಿವೆ. ಬರೋ ದಿನಗಳಲ್ಲಿ ಇದಿನ್ನು ಹೆಚ್ಚಲಿದೆ ಎಂದು ಅಶೋಕ ಆತಂಕ ಹೊರಹಾಕಿದರು. 15 ಬಾರಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ಯಾವಾಗ ಅದೆಷ್ಟು ಹಣ ಹೊಂದಿಸಬೇಕು ಎಂಬುದು ಗೊತ್ತಿಲ್ಲವೆ? ಬಜೆಟ್ ಮಾರನೇ ದಿನವೇ ತೈಲಬೆಲೆ ಹೆಚ್ಚಿಸಬೇಕಿತ್ತು. ಸಮರ್ಥ ಹಣಕಾಸು ಸಚಿವನೆಂದು ಹೇಳಿಕೊಳ್ಳುವ ಸಿಎಂ ಸಮರ್ಥರಲ್ಲ. ತೆರಿಗೆ ಹೆಚ್ಚಿಸಿ ರಾಜ್ಯಭಾರ ಮಾಡುತ್ತಿದ್ದಾರೆಂದು ಅಶೋಕ ತಿವಿದರು.