ಕಡಿಮೆಯಾಗುತ್ತಿರುವ ಶ್ರೀಗಂಧ ಮರಗಳು: ಡಾ. ರಾಜೇಂದ್ರ ನಂದಗಾಂವಿ ವಿಷಾದ

KannadaprabhaNewsNetwork | Published : Jun 21, 2024 1:05 AM

ಸಾರಾಂಶ

ಗಂಧದ ನಾಡಾದ ರಾಝ್ಯದಲ್ಲಿ ಇಂದು ಶ್ರೀಗಂಧದ ಮರ ಬೆಳೆಯುವುದು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ಬಾಗಲಕೋಟೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜೇಂದ್ರ ನಂದಗಾಂವಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಹಿಂದೆ ಡಾ.ರಾಜಕುಮಾರ್‌ ಅವರು ಹಾಡಿದ ಅಂದದ ನಾಡು ಚಂದದ ನಾಡು ಶ್ರೀಗಂಧದ ಬೀಡು ಎಂದು ಹಾಡಿ ಹೊಗಳಿದ ಈ ನಾಡಲ್ಲಿ ಇಂದು ಶ್ರೀಗಂಧದ ಮರ ಬೆಳೆಯುವದು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ಬಾಗಲಕೋಟೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದ್ರ ನಂದಗಾಂವಿ ಹೇಳಿದರು.ಇಲ್ಲಿಯ ಕೃಷಿ ಸಭಾಭವನದಲ್ಲಿ ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ಹಾಗೂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಗಂಧದ ಮರಗಳ ಸಾಗುವಳಿ ತಂತ್ರಜ್ಞಾನ ಒಂದು ದಿನದ ರತಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ರೈತ ಗಂಧದ ಮರ ಬೆಳೆಸಲು ಮುಂದಾಗಬೇಕು. ಇದರಿಂದ ಅತೀ ಹೆಚ್ಚು ಆದಾಯ ಗಳಿಸಬಹುದು, ಗಂಧದ ಮರಗಳನ್ನು ಎಲ್ಲ ಬೆಳೆಗಳ ಜೊತೆಗೆ ಬೆಳೆಸಬಹುದು ಎಂದ ಅವರು, ಸರ್ಕಾರ ಇಂದು ಗಂಧದ ಮರ ಬೆಳವಣಿಗೆಗೆ ಅನೇಕ ರೀತಿಯ ಯೋಜನೆಗಳನ್ನು ಮಾಡಿ ಆರ್ಥಿಕ ಸಹಾಯ ಮಾಡುತ್ತಿದೆ. ಇದರ ಸದುಪಯೋಗವನ್ನು ಈ ಭಾಗದ ರೈತರು ಪಡೆದುಕೊಳ್ಳಬೇಕು ಎಂದರು.

ಗಂಧದ ಮರಗಳ ನಾಟಿ ಮಾಡುವ ಮತ್ತು ಅವುಗಳ ಬೆಳವಣಿಗೆ ಕುರಿತು ಬೆಂಗಳೂರಿನ ಡಾ.ನರಸಿಂಹಮೂರ್ತಿ, ಗಂಧದ ಮರಳಿಗೆ ಬರುವ ಕೀಟಗಳ ಬಾಧೆ ಮತ್ತು ಅವುಗಳ ನಿಯಂತ್ರಣ ಕುರಿತು ಬೆಂಗಳೂರಿನ ಡಾ. ರಶ್ಮಿ ಶಾನಬಾಗ, ಗಂಧದ ಮರಕ್ಕೆ ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ ಕುರಿತು ಬಾಗಲಕೋಟೆಯ ಸಸ್ಯ ವಿಜ್ಞಾನಿ ಡಾ. ಸುಧಾ ಎಸ್. ಮತ್ತು ಗಂಧದ ಮರಗಳ ಸಾಗುವಳಿಗೆ ಮಣ್ಣು ನೀರು ಹಾಗೂ ನಿರ್ವಹಣೆ ಕುರಿತು ಹಿರಿಯ ತಾಂತ್ರಿಕ ವಿಜ್ಞಾನಿ ಡಾ.ಸಿದ್ದಪ್ಪ ಅಂಗಡಿ ವಿವರಿಸಿದರು.

ತರಬೇತಿಗೆ ನೂರಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು. ಪ್ರಗತಿ ಪರ ರೈತರಾದ ದೇವರಾಜ ಪಾಟೀಲ, ಇಳಕಲ್ಲಿನ ಎಂ.ಆರ್. ಪಾಟೀಲ ಮತ್ತು ದೇಶಿ ತರಬೇತಿ ಮುಖಂಡ ಬಸವರಾಜ ಮಠದ ಹಾಗೂ ಇತರರು ಸಸಿಗೆ ನೀರು ಹಾಕಿ ತರಬೇತಿಗೆ ಉದ್ಘಾಟನೆ ಮಾಡಿದರು. ಕೃಷಿ ವಿಜ್ಞಾಬ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡ ಡಾ.ಎಸ್.ಬಿ. ಪಾಟೀಲ ಅವರನ್ನು ಗೌರವಿಸಿ ಸತ್ಕರಿಸಲಾಯಿತು. ಡಾ.ಭವ್ಯ ಎಂ.ಆರ್‌. ಸ್ವಾಗತಿಸಿದರು. ಮಮತಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶಮಿತಾ ವಂದಿಸಿದರು.

Share this article