ರೈತರಿಗೆ ಗುಣಮಟ್ಟದ ಸಸಿ ನೀಡಿ: ರೇಹಾನ್‌ ಪಾಷ

KannadaprabhaNewsNetwork | Published : Jun 21, 2024 1:05 AM

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಖಾಸಗಿ ನರ್ಸರಿ ಮತ್ತು ರೈತ ಮುಖಂಡ ಸಭೆಯಲ್ಲಿ ತಹಸೀಲ್ಧಾರ್ ರೇಹಾನ್‌ ಪಾಷ ಮಾತನಾಡಿದರು.

ತೋಟಗಾರಿಕೆ ಅಧಿಕಾರಿ, ರೈತ ಮುಖಂಡರೊಡನೆ ತಹಸೀಲ್ದಾರ್‌ ಸಭೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆತಾಲೂಕಿನಾದ್ಯಂತ ವಿವಿಧೆಡೆ ಖಾಸಗಿ ನರ್ಸರಿ ಫಾರಂಗಳಲ್ಲಿ ರೈತರಿಗೆ ಕಳಪೆ ಸಸಿ ನೀಡುವುದಲ್ಲದೆ, ಸೂಕ್ತವಾದ ದರ ನಮೂದಿಸದೆ, ಬಿಲ್ ನೀಡದೆ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ರೇಹಾನ್‌ಪಾಷ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಅಧಿಕಾರಿಗಳು, ರೈತ ಮುಖಂಡರೊಡನೆ ಸಭೆ ನಡೆಸಿದರು.

ಈ ವೇಳೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಚಳ್ಳಕೆರೆ ನಗರದಲ್ಲಿ 21, ತಾಲೂಕಿನಾದ್ಯಂತ 20 ಒಟ್ಟು 41 ಖಾಸಗಿ ನರ್ಸರಿಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು 50 ಲಕ್ಷದಿಂದ 1 ಕೋಟಿಯವರೆಗೂ ವಹಿವಾಟು ನಡೆಸುತ್ತಿವೆ. ತಾಲೂಕಿನಾದ್ಯಂತ ಒಟ್ಟು 2,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೇಟೊ ಬೆಳೆ ನಾಟಿ ಮಾಡುವ ಗುರಿ ಇದ್ದು, ಪ್ರಸ್ತುತ 1,300 ಹೆಕ್ಟರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಹಿರೇಹಳ್ಳಿ ಗ್ರಾಮದ ರೈತ ರುದ್ರಮುನಿಯಪ್ಪ ಎಂಬುವವರೂ ಸೇರಿ ಹಲವಾರು ರೈತರು 100 ಎಕರೆ ಪ್ರದೇಶದಲ್ಲಿ ಟೊಮೇಟೊ ನಾಟಿ ಮಾಡಿದ್ದು ಬಿಸಿಲಿನ ತಾಪಕ್ಕೆ ಹೂ ಉದರಿ ಕಾಯಿಕಟ್ಟದೆ ಇರುವುದು ಕಂಡುಬಂದಿದ್ದು, ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪ್ರತಿಯೊಂದು ನರ್ಸರಿಯಲ್ಲೂ ದರಪಟ್ಟಿ ನಮೂದಿಸುವಂತೆ ರೈತರಿಗೆ ಸೂಕ್ತ ರೀತಿಯಲ್ಲಿ ಬಿಲ್ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಹಿರೇಹಳ್ಳಿ ಭಾಗದಲ್ಲಿ ಸುಮಾರು 100 ಎಕರೆ ಪ್ರದೇಶದ ಟೊಮೇಟೊ ಬೆಳೆ ಹಾಳಾಗಿದೆ. ಹತ್ತಾರು ರೈತರು ಸಂಕಷ್ಟಕ್ಕೀಡಾಗಿ ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ. ಸಂಬಂಧಪಟ್ಟ ನರ್ಸರಿಯವರು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಹಾಜರಿದ್ದ ಭಜರಂಗಿ ನರ್ಸರಿ ಮಾಲೀಕ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಆಗಿರುವ ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದ್ದು, ಆದರೆ, ಇದುವರೆಗೂ ರೈತರಿಗೆ ಯಾವುದೇ ಹಣ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ರೈತರಿಗೆ ಪರಹಾರ ಕೊಡಿಸುವಂತೆ ಮನವಿ ಮಾಡಿದರು.

ತಹಸೀಲ್ದಾರ್ ರೇಹಾನ್‌ಪಾಷ ಮಾತನಾಡಿ ರೈತರ ಸಮಸ್ಯೆಗೆ ಸಂಬಂಧಪಟ್ಟಂತೆ ತಾಲೂಕು ಆಡಳಿತ ಹೆಚ್ಚು ಜಾಗೃತೆಯಿಂದ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಬೆಳೆನಷ್ಟ, ಬೆಳೆ ವಿಮೆ ಕುರಿತಂತೆ ರೈತರಿಂದ ಬಂದ ಆಹವಾಲುಗಳನ್ನು ಸ್ವೀಕರಿಸಿ ಅವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕಳೆದ ಮೇ. ಜೂನ್ ತಿಂಗಳಲ್ಲಿ ಮಳೆಯಿಂದ ಆದ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಹ ಕಳಿಸಿಕೊಡಲಾಗಿದೆ. ಖಾಸಗಿ ನರ್ಸರಿಯವರು ಕೈಗೊಳ್ಳುವ ಎಲ್ಲಾ ಹಂತದ ಯೋಜನೆಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗಮನಹರಿಸಿ ರೈತರಿಗೆ ನಷ್ಟವಾಗದಂತೆ ಜಾಗ್ರತೆ ವಹಿಸಬೇಕೆಂದು ತಿಳಿಸಿದರು. ಈ ವೇಳೆ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಶ್ರೀನಿವಾಸ್, ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Share this article