ಭಾರತೀಯರನ್ನು ಒಂದುಗೂಡಿಸುವ ಯೋಗ!

KannadaprabhaNewsNetwork | Published : Jun 21, 2024 1:05 AM

ಸಾರಾಂಶ

ಪ್ರತಿನಿತ್ಯ ಒಂದು ಗಂಟೆ ಯೋಗಕ್ಕಾಗಿ ಮೀಸಲಿಟ್ಟು, ಯೋಗಾಸನ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿದರೆ, ನಾವುಗಳು ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಇರಲು ಸಾಧ್ಯ. ನಮ್ಮೆಲ್ಲ ಕೆಲಸ ಕಾರ್ಯಗಳು ಶ್ರೇಷ್ಠವಾಗಬೇಕೆಂದರೆ ಪ್ರತಿನಿತ್ಯ ಯೋಗ ಮಾಡಬೇಕು.

ಧಾರವಾಡ:

ಒತ್ತಡ ನಿರ್ವಹಣೆ, ಉತ್ತಮ ಆರೋಗ್ಯಕ್ಕಾಗಿ ಯೋಗ ಸೂಕ್ತ ಚಿಕಿತ್ಸಾ ಕ್ರಮವಾಗಿದ್ದು ಧಾರವಾಡ ಜನರು ಸಹ ಯೋಗವನ್ನು ನಿತ್ಯದ ಕ್ರಮವಾಗಿ ರೂಢಿಸಿಕೊಂಡಿದ್ದಾರೆ.

ತಮ್ಮ ತಮ್ಮಲ್ಲಿಯೇ ತಂಡ ರಚಿಸಿಕೊಂಡು ಉದ್ಯಾನವನ, ಸಭಾಭವನ, ಸಮುದಾಯ ಭವನಗಳಲ್ಲಿ ನಿತ್ಯವೂ, ವಾರಕ್ಕೊಮ್ಮೆ ಯೋಗ ತರಬೇತಿಗಳು ಜರುಗುತ್ತವೆ. ಕೆಲವರು ತರಬೇತಿ ಪಡೆದು ಮನೆಯಲ್ಲಿ ಯೋಗ ಮಾಡುತ್ತಿದ್ದಾರೆ. ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಧಾರವಾಡದಲ್ಲಿ ಯೋಗವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಆಯುಷ್‌ ಇಲಾಖೆ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಪತಂಜಲಿ ಯೋಗ ಸಮಿತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಹತ್ತು ಹಲವು ಕಾರ್ಯಕ್ರಮ ಆಯೋಜಿಸಿವೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಪತಂಜಲಿ ವತಿಯಿಂದ ಗುರುವಾರ ಲಿಂಗಾಯತ ಟೌನ್‌ ಹಾಲ್‌ನಿಂದ ನಗರದ ವಿವಿಧೆಡೆ ಯೋಗ ಜಾಗೃತಿ ಜಾಥಾ, ಆರೋಗ್ಯದ ಜನ ಜಾಗೃತಿ ನಡೆಯಿತು. ಜಾಥಾದಲ್ಲಿ ರಮೇಶ್ ಸುಲಾಕೆ, ಎಂ.ಡಿ. ಪಾಟೀಲ್, ಶೈಲಜಾ ಮಾಡಿಕರ್, ಉಮಾ ಅಗಡಿ, ವಸ್ತ್ರದಮಠ, ನಾಗರತ್ನ ಸುಲಾಕೆ, ತನುಜಾ ಪಾಟೀಲ್, ರಾಜೇಶ್ವರಿ ಹಡಗಲಿ, ರೂಪಾ ಬಡಿಗೆ, ಭಾಗ್ಯಶ್ರೀ ಬಡಿಗೆ, ಸೌಮ್ಯ ಮಲ್ಲಾಪುರ್ ಮತ್ತಿತರರು ಇದ್ದರು.

ಯೋಗಗುರು ಭವರಲಾಲ್ ಆರ್ಯ ಮಾತನಾಡಿ, ರಾಜ್ಯದೆಲ್ಲೆಡೆ ಏಕಕಾಲಕ್ಕೆ ಸಂಸ್ಥೆಯಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುವುದು. ಸ್ವಾಮಿ ರಾಮದೇವ ಜೀ ಮಹಾರಾಜರು ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಮತ್ತು ಕರ್ನಾಟಕದ ರಾಜ್ಯ ಪ್ರಭಾರಿ ತಾವು ಹೊಸಪೇಟೆಯ ಫ್ರೀರ್ಡ್ಂಪಾರ್ಕ್‌ನಲ್ಲಿ ಯೋಗ ದಿನಾಚರಣೆ ಮಾಡಲಿದ್ದೇವೆ. ಯಾವುದೇ ಜಾತಿ, ಧರ್ಮ, ಮತ, ಪಂಥ ಭೇದವಿಲ್ಲದೆ ಸಂಪೂರ್ಣ ಭಾರತೀಯರನ್ನು ಒಂದುಗೂಡಿಸುವ ಹಬ್ಬವೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಆದ್ದರಿಂದ ಶುಕ್ರವಾರದ ''''''''ಯೋಗ ಮಹೋತ್ಸವ'''''''' ದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.

ಪ್ರತಿನಿತ್ಯ ಒಂದು ಗಂಟೆ ಯೋಗಕ್ಕಾಗಿ ಮೀಸಲಿಟ್ಟು, ಯೋಗಾಸನ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿದರೆ, ನಾವುಗಳು ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಇರಲು ಸಾಧ್ಯ. ನಮ್ಮೆಲ್ಲ ಕೆಲಸ ಕಾರ್ಯಗಳು ಶ್ರೇಷ್ಠವಾಗಬೇಕೆಂದರೆ ಪ್ರತಿನಿತ್ಯ ಯೋಗ ಮಾಡಬೇಕು. ಪತಂಜಲಿ ಯೋಗ ಪೀಠವು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವರೆಗೂ ರಾಜ್ಯದ್ಯಂತ ಯೋಗ ಶಿಕ್ಷಕರ ತರಬೇತಿ ಶಿಬಿರ, ಅಗ್ನಿಹೋತ್ರ ತರಬೇತಿ, ಸಂಸ್ಕೃತ ಕಲಿಕಾ ಶಿಬಿರ, ಬಾಲ ಸಂಸ್ಕಾರ ಶಿಬಿರಗಳನ್ನು ವರ್ಷ ಪೂರ್ತಿ ನಡೆಸಲಿದ್ದೇವೆ ಎಂದರು. ಇಂದು ಯೋಗ ದಿನಾಚರಣೆ

ಜಿಲ್ಲಾ ಆಯುಷ್ ಇಲಾಖೆ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ 10ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ಬೆಳಗ್ಗೆ 6.30ಕ್ಕೆ ಡಾ. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ವಿಶ್ವ ಯೋಗ ದಿನಾಚರಣೆ ಪೂರ್ವ ತಯಾರಿಯನ್ನು ಕುಂದಗೋಳ ತಾಲೂಕಿನ ಯಲಿವಾಳದ ಸರ್ಕಾರಿ ಪ್ರೌಢಶಾಲಾ ಮಕ್ಕಳು ನಡೆಸಿದರು. ಶಿಕ್ಷಕರಾದ ಎಸ್.ಟಿ. ಅರಸನಾಳ, ನಾರಾಯಣ ಭಜಂತ್ರಿ, ಬಸವರಾಜ ಚಿಕ್ಕನರಗುಂದ, ಸುವರ್ಣಾ ಇಟಿ, ಅಕ್ಕಮ್ಮ ದಂಡಿನ ತರಬೇತಿ ನೀಡಿದರು. ಹಾಗೆಯೇ, 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗುರುವಾರ ಹೊಸಯಲ್ಲಾಪೂರದ ನುಚ್ಚಂಬ್ಲಿ ಬಾವಿಯಲ್ಲಿ ಯುವಕರು ಬಾವಿಯ ನೀರಿನಲ್ಲಿ ಜಲ ಯೋಗ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.ಯೋಗವು ಚಂಚಲ ಮನಸ್ಸನ್ನು ಏಕಾಗ್ರಗೊಳಿಸಬಲ್ಲ ಮನೋವ್ಯಾಯಾಮವೂ ಆಗಿದೆ. ಯೋಗ ಎಂದರೆ ಸರ್ವ ಮನೋವ್ಯಾಪಾರಗಳ ಮೇಲೆ ಪ್ರಭುತ್ವ ಸ್ಥಾಪಿಸುವುದು. ವರ್ತಮಾನ ಸಮಯದಲ್ಲಿ ಯೋಗದಲ್ಲಿ ಹಠಯೋಗ, ಸನ್ಯಾಸಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಶುಭಯೋಗ, ಲಾಭಯೋಗ, ಯೋಗಾ-ಯೋಗ ಮುಂತಾದ ಅನೇಕ ಪ್ರಕಾರಗಳು ಇವೆ ಎಂದು ಯೋಗ ತರಬೇತುದಾರ ಎಂ.ಡಿ. ಪಾಟೀಲ

ಹೇಳಿದರು.

Share this article