ಕನ್ನಡಪ್ರಭ ವಾರ್ತೆ ಮೈಸೂರು
ಲೋಕಸಭೆ ಚುನಾವಣೆಯ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸೋಮವಾರ ಅಥವಾ ಮಂಗಳವಾರ ಪ್ರಕಟ ಆಗುವ ನಿರೀಕ್ಷೆ ಇದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟಾಗಲಿ, ಎಳೆದಾಟವಾಗಲಿ ಆಗಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರ ರೀತಿ ನಾವು ಸುಳ್ಳು ಹೇಳಲ್ಲ.
ಅವರು 28 ಕ್ಷೇತ್ರ ಗೆಲ್ಲುತ್ತೇವೆ ಅಂತಾರೆ. ಆದರೆ ಅದು ಸಾಧ್ಯನಾ? ಎಂದು ಇದೇ ವೇಳೆ ಸಿದ್ದರಾಮಯ್ಯ ಕಿಡಿಕಾರಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ನಮಗೆ ಅನುಕೂಲವೇ ಆಗಲಿದೆ. ಈ ಹಿಂದೆ ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಿದ್ದಾಗ ನಮಗೆ ಅನಾನುಕೂಲವೇ ಆಗಿತ್ತು.
ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ನಮ್ಮ ರೀತಿಯೇ ಇವರಿಗೂ ಅನಾನುಕೂಲವೇ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ಬಿಜೆಪಿಯವರು ತಮ್ಮ 600 ಭರವಸೆಗಳಲ್ಲಿ ಶೇ.10ರಷ್ಟನ್ನೂ ಈಡೇರಿಸಿಲ್ಲ.
ಮೋದಿಯವರು ಜನಕ್ಕೆ 15 ಲಕ್ಷ ಕೊಟ್ರಾ?
2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದರು, ಅದನ್ನು ಈಡೇರಿಸಿದ್ರಾ? ರೈತರ ಆದಾಯ ಡಬಲ್ ಮಾಡಿದ್ರಾ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದರು.