ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಮಾಡಲಾಗಿದೆ. ಒಬ್ಬರ ಮನೆಯಲ್ಲಿ ರು. 42 ಕೋಟಿ ಸಿಕ್ಕಿದೆ, ಇನ್ನೊಬ್ಬರ ಮನೆಯಲ್ಲಿ ರು. 45 ಕೋಟಿ ಸಿಕ್ಕಿದೆ. ಇದು ಕಾಂಗ್ರೆಸ್ ಮುಖಂಡರ ದುಡ್ಡು. ಇದು ಭ್ರಷ್ಟಾಚಾರದ ಹಣ ಎನ್ನುವುದು ಜನಜನಿತ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದಿದ್ದಾರೆ ಜೋಶಿ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ರಾಜ್ಯ ಸರ್ಕಾರ ಪಂಚ ರಾಜ್ಯಗಳ ಚುನಾವಣೆ, ಲೋಕಸಭಾ ಚುನಾವಣೆಗಾಗಿ ₹1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆಳೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅನೈತಿಕ ಮಾರ್ಗದಿಂದ ಈ ರೀತಿಯ ಹಣ ಸಂಗ್ರಹಕ್ಕೆ ಮುಂದಾಗಿದೆ. ನನಗಿರುವ ಮಾಹಿತಿಯ ಪ್ರಕಾರ ₹1000 ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ಮಾಡಲಾಗಿದೆ. ಒಬ್ಬರ ಮನೆಯಲ್ಲಿ ₹42 ಕೋಟಿ ಸಿಕ್ಕಿದೆ, ಇನ್ನೊಬ್ಬರ ಮನೆಯಲ್ಲಿ ₹45 ಕೋಟಿ ಸಿಕ್ಕಿದೆ. ಇದು ಕಾಂಗ್ರೆಸ್ ಮುಖಂಡರ ದುಡ್ಡು. ಇದು ಭ್ರಷ್ಟಾಚಾರದ ಹಣ ಎನ್ನುವುದು ಜನಜನಿತ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಇದು ಇಲ್ಲಿಯ ವರೆಗೆ ಆಗಿರುವುದು, ಮುಂದೆ ಏನೇನು ಆಗುತ್ತದೆಯೋ ಕಾದು ನೋಡಬೇಕು ಎಂದರು. ಐಟಿ ರೇಡ್‌ನಲ್ಲಿ ಸಿಕ್ಕಿರುವುದು ಕಮೀಷನ್ ಹಣ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತು ಸಿಬಿಐ, ಇಡಿ ಸಮಗ್ರ ತನಿಖೆ ಮಾಡಬೇಕು. ಇವರು ಸತ್ಯ ಹರಿಶ್ಚಂದ್ರನಂತೆ ಫೋಸ್ ಕೊಡುತ್ತಿದ್ದರು. ಆದರೆ, ಈಗ ಇವರ ಕರಾಳ ಮುಖ ಹೊರಬಂದಿದ್ದು, ಇದೇ ನೈತಿಕ ಅಧಃಪಥನಕ್ಕೆ ಕಾರಣವಾಗಲಿದೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಕಮಿಷನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಈ ರೇಡ್ ಹಿಂದೆ ಮನಿ ಲಾಂಡ್ರಿಂಗ್ ನಡೆದಿರುವ ಅನುಮಾನವಿದೆ. ಕಾಂಗ್ರೆಸ್ ಮುಖಂಡರೇ ಇದರಲ್ಲಿ ಇರುವುದು ಎಲ್ಲರಿಗೂ ಗೊತ್ತು ಎಂದರು. ಕತ್ತಲೆಯಲ್ಲಿ ರಾಜ್ಯ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಕತ್ತಲೆಯನ್ನು ಖಚಿತ ಪಡಿಸುತ್ತಿದೆ. ಸರ್ಕಾರ ಅನಿಯಮಿತ ವಿದ್ಯುತ್ ನಿಲುಗಡೆಗೆ ಮುಂದಾಗಿದೆ. ಇದು ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದಾರೆ. ನಮಗೆ ಒಟ್ಟು ವಿದ್ಯುತ್ ಬೇಕಾದ 33,350 ಮೆಗಾವ್ಯಾಟ್ ವಿದ್ಯುತ್ ಇದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ವಿಚಾರವಾಗಿ ಹಲವು ಕ್ರಮ ಕೈಗೊಂಡಿದೆ. ನವೀಕರಣದ ವಿಚಾರದಲ್ಲಿ ಭಾರತ ಮಹತ್ತರ ಹೆಜ್ಜೆ ಇಟ್ಟಿದೆ. ಇಡೀ ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸೋಲಾರ್, ನವೀಕರಣ ಶಕ್ತಿ ಹೆಚ್ಚಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಿಂತಲೂ ನಾವು ಹೆಚ್ಚಿನ ಕಲ್ಲಿದ್ದಲು ನೀಡುತ್ತಿದ್ದೇವೆ. 39 ಸಾವಿರ ಟನ್ ಕಲ್ಲಿದ್ದಲು ಕೊಡುತ್ತಿದ್ದೇವೆ. ಕಳೆದ 7 ದಿನದಲ್ಲಿ 56 ಸಾವಿರ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ ಎಂದರು. ರಾಜ್ಯ ಸರ್ಕಾರವು ನಮ್ಮ ಇಲಾಖೆಗೆ ₹683 ಕೋಟಿ ಕೊಡಬೇಕು. ಯಾವುದೂ ಪೂರ್ವಾಪರ ಯೋಚನೆ ಇಲ್ಲದೆ ಉಚಿತ ವಿದ್ಯುತ್ ಎಂದು ಘೋಷಣೆ ಮಾಡಿದರು. ಈಗ ನೋಡಿದರೆ ವಿದ್ಯುತ್ ಕಟ್ ಮಾಡುತ್ತಿದ್ದಾರೆ. ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲು ಹಿಂದೇಟು ಹಾಕುತ್ತಿದೆ. ಬೋಗಸ್ ಅಶ್ವಾಸನೆ ನೀಡಿ ಜನರನ್ನು ಕತ್ತಲೆಯ ಭಾಗ್ಯಕ್ಕೆ ತಳ್ಳಿದಾರೆ ಎಂದು ಆರೋಪಿಸಿದರು. ಹಳೇ ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೊಲೀಸ್ ಹಿರಿಯ ಅಧಿಕಾರಿಗೆ ಪತ್ರ ಬರೆದಿರುವುದು ಖಂಡನಾರ್ಹ ಎಂದು ಜೋಶಿ ಹೇಳಿದರು. ಹಿಂದೂ ವಿರೋಧಿ ಸರ್ಕಾರ: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುವ ಕಾರ್ಯವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ವಿರೋಧಿಯಾಗಿದೆ. ನಿಮಗೆ ತಾಕತ್ತು ಇದ್ದರೆ ಒಂದು ಸಮಾಜದ ವಿರುದ್ಧವಾಗಿ ಕೆಟ್ಟದಾಗಿ ಮಾತನಾಡಿದ ಭಗವಾನ್ ಅವರನ್ನು ಬಂಧಿಸಿ. ಚಕ್ರವರ್ತಿ ಸೂಲಿಬೆಲೆ ನಿಮ್ಮ ದುಷ್ಕೃತ್ಯವನ್ನು ಜನರ ಮುಂದೆ ಹೇಳಿದ್ದಾರೆ. ಅವರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು ಎಂದು ಪ್ರಹ್ಲಾದ ಜೋಶಿ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.