ಕನ್ನಡಪ್ರಭ ವಾರ್ತೆ ಉಚ್ಚಿಲ ಉಚ್ಚಿಲ ದಸರಾವು ಕೇವಲ ಉಚ್ಚಿಲಕ್ಕೆ ಸೀಮಿತವಾಗದೆ ಉಡುಪಿ ಜಿಲ್ಲೆಯ ದಸರವಾಗಲಿ, ಜಿಲ್ಲೆಯ ಜನರೆಲ್ಲರೂ ಭಾಗವಹಿಸುವ ಹಬ್ಬವಾಗಲಿ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆಶಿಸಿದರು. ಅವರು ಭಾನುವಾರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಚ್ಚಿಲ ದಸರಾ- 2023ಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಿನಾದ್ಯಂತ ನವರಾತ್ರಿಯ ಸಂದರ್ಭ ಭಕ್ತಿಭಾವದ ಪರಕಾಷ್ಟೆಯನ್ನು ಕಾಣಬಹುದಾಗಿದೆ. ಉಚ್ಚಿಲ ದಸರಾವು ಉಡುಪಿಯ ದಸರಾದ ರೂಪ ಪಡೆಯುತ್ತಿದೆ. ಆದ್ದರಿಂದ ಈ ದಸರಾಕ್ಕೆ ಸರ್ಕಾರದಿಂದಲೂ ಅನುದಾನದ ಸಹಾಯ ನೀಡಲಾಗಿದೆ. ಈ ದಸರೆಯು ನಾಡಿಗೆ ಸುಖ ಸಮದ್ಧಿ, ಜನರು ಸುಖ ನೆಮ್ಮದಿಗೆ ಕಾರಣವಾಗಲಿ ಎಂದು ಹಾರೈಸಿದರು. ನೂತನ ಅತಿಥಿಗೃಹ, ಅನ್ನ ಛತ್ರ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಮೀನುಗಾರಿಕಾ ಪರಿಕರಗಳು ಮತ್ತು ಮನೋಹರ್ ಎರ್ಮಾಳು ಅವರ ಛಾಯಾಚಿತ್ರ ಪ್ರದರ್ಶನವನ್ನು ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಿದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ತಹಸೀಲ್ದಾರ್ ನಾಗರಾಜ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮೊಗವೀರ ಮಹಾಜನ ಸಂಘದ ಮಹಿಳಾ ಘಟಕಾಧ್ಯಕ್ಷೆ ಅಧ್ಯಕ್ಷೆ ಉಷಾರಾಣಿ, ನಾಲ್ಕುಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷೆ ಸುಗುಣ ಕರ್ಕೇರ ಉಪಸ್ಥಿತರಿದ್ದರು. ನಾಡೋಜ ಜಿ. ಶಂಕರ್ ಸ್ವಾಗತಿಸಿದರು. ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು. ಬಾಕ್ಸ್ ಶಾರದೆಗೆ ಬೆಳ್ಳಿಯ ವೀಣೆ - ಕಿರೀಟ ಅರ್ಪಣೆ ಬೆಳಗ್ಗೆ ನವದುರ್ಗೆಯರು ಮತ್ತು ಶ್ರೀ ಶಾರದಾ ಪ್ರತಿಷ್ಠಾಪನೆ, ಶಾರದೆಗೆ ಬೆಳ್ಳಿ ವೀಣೆ, ಬೆಳ್ಳಿ ಕಿರೀಟ ಸಮರ್ಪಣೆ ನಡೆಯಿತು. ದಿನವಿಡೀ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾರತಿ, ಅನ್ನಸಂತರ್ಪಣೆ, ಸಾವಿರ ಸುಮಂಗಲೆಯರಿಂದ ಕುಂಕುಮಾರ್ಚನೆ, ಚಂಡಿಕಾ ಹೋಮ, ಶ್ರೀದುರ್ಗಾ ಕಲ್ಪೋಕ್ತ ಪೂಜೆ, ಯುವ ದಸರಾ - ನೃತ್ಯ ಸ್ಪರ್ಧೆಗಳು ನಡೆದವು. ಇಂದು ಬ್ರಹ್ಮಚಾರಣಿ ದೇವಿ ಆರಾಧನೆ ಸೋಮವಾರ ಮಾತೆ ಬ್ರಹ್ಮಚಾರಿಣಿ ದೇವಿಯ ಆರಾಧನೆ ನಡೆಯಲಿದೆ. ನಿತ್ಯಚಂಡಿಕಾ ಹೋಮ, ಶ್ರೀಆರ್ಯ ಕಲ್ಪೋಕ್ತ ಹೋಮ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಿಳೆಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ರಾತ್ರಿ ಜನ್ಸಾಲೆ ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ.