ಕೇಂದ್ರ ಸರ್ಕಾರದ ಬೆಲೆಯೇರಿಕೆ ಖಂಡಿಸಿ 19ಕ್ಕೆ ಹಾವೇರಿಯಲ್ಲಿ ಕೈ ಪ್ರತಿಭಟನೆ

KannadaprabhaNewsNetwork |  
Published : Apr 17, 2025, 12:04 AM IST
16ಎಚ್‌ವಿಆರ್‌1-ಡಾ.ಸಂಜಯ ಡಾಂಗೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಏ. 19ರಂದು ಬೆಳಗ್ಗೆ 10ಕ್ಕೆ ಹಾವೇರಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಾವೇರಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ಸಂಜಯ ಡಾಂಗೆ ಹೇಳಿದರು.

ಹಾವೇರಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿ ಖಂಡಿಸಿ ಏ. 19ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಡಾ. ಸಂಜಯ ಡಾಂಗೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಲೇ ಬಂದಿದೆ. ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಕಾಣುತ್ತಲೇ ಇದೆ. ಡಾಲರ್ ಮೌಲ್ಯ ಹೆಚ್ಚಳವಾಗಿ ರುಪಾಯಿ ಅಪಮೌಲ್ಯವಾಗುತ್ತಿದೆ. ಹಾಲು, ಮೊಸರು, ಬಟ್ಟೆ ಹೀಗೆ ಯಾವುದೇ ವಸ್ತು ಖರೀದಿಸಿದರೂ ಜಿಎಸ್‌ಟಿ ಕಟ್ಟಬೇಕಾಗಿದೆ. ಕೇಂದ್ರ ಬಿಜೆಪಿ ನಾಯಕರು ಖಾಸಗಿ ಕಂಪನಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅವರನ್ನು ತೃಪ್ತಿಪಡಿಸುವ ಸಲುವಾಗಿ ದೇಶದ ಬಡ ಜನರ ಮೇಲೆ ಬೆಲೆ ಏರಿಕೆ ಹೊರೆಯನ್ನು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿಯವರು ಯಾವ ನೈತಿಕತೆ ಇಟ್ಟುಕೊಂಡು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ರಾಜ್ಯದಲ್ಲಿರುವ ಐದು ಜನ ಬಿಜೆಪಿ ಕೇಂದ್ರ ಸಚಿವರು ಸುಮ್ಮನೆ ಕೂತಿದ್ದಾರೆ. ಬೆಲೆ ಏರಿಕೆ ಬಗ್ಗೆ ಚಕಾರ ಎತ್ತದೇ ಪ್ರಧಾನಿ ಬಳಿ ತೆರಳಿ ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ರಾಜ್ಯದ ಬಿಜೆಪಿ ನಾಯಕರೂ ಕೇಂದ್ರಕ್ಕೆ ಹೋಗಿ ಬೆಲೆ ಏರಿಕೆ ಕಡಿಮೆ ಮಾಡಿ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿಯನ್ನು ಕೊಡಿಸುವಂತೆಯೂ ಧ್ವನಿ ಎತ್ತುತ್ತಿಲ್ಲ. ಜನಾಕ್ರೋಶ ಯಾತ್ರೆ ಕೇಂದ್ರದ ವಿರುದ್ಧ ಮಾಡಬೇಕು. ರಾಜ್ಯ ಸರ್ಕಾರದ ವಿರುದ್ಧ ಮಾಡುವುದರಲ್ಲಿ ಯಾವ ತಿರುಳೂ ಇಲ್ಲ. ಕೇವಲ ರಾಜಕೀಯಕ್ಕಾಗಿ, ಜನರ ದಾರಿ ತಪ್ಪಿಸುವ ಸಲುವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸತ್ಯಾಂಶವನ್ನು ತಿಳಿಸುವ ಸಲುವಾಗಿ ಹಾಗೂ ಕೇಂದ್ರದ ನೀತಿ ಖಂಡಿಸಿ ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಏ. 17ರಂದು ಕೇಂದ್ರದ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಿಎಂ, ಡಿಸಿಎಂ, ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಏ. 19ರಂದು ಹಾವೇರಿಯಲ್ಲಿ ಪ್ರತಿಭಟಿಸಲಾಗುವುದು. ಜಿಲ್ಲೆಯ ಆರು ಜನ ಶಾಸಕರು, ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಅಂದು ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹೊಸಮನಿ ಸಿದ್ದಪ್ಪ ವೃತ್ತವನ್ನು ತಲುಪಲಿದೆ. ಈ ಹಿನ್ನೆಲೆ ಪಕ್ಷದ ಹಿರಿಯ ನಾಯಕರು, ಯುವ ಕಾಂಗ್ರೆಸ್, ಮಹಿಳಾ, ವಿವಿಧ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಬಿಜೆಪಿಯವರು ಜನರ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೇ ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನು ಹೇಗಾದರೂ ಮಾಡಿ ಬಂದ್ ಮಾಡಿಸಬೇಕು ಎಂದು ಹಲವು ವಿಷಯ ಇಟ್ಟುಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿಗಳು ಬಡಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಅಭಿವೃದ್ಧಿ ಕಾರ್ಯಕ್ಕಾಗಿ ಪ್ರತಿ ಕ್ಷೇತ್ರಕ್ಕೆ ಅನುದಾನ ನೀಡಲಾಗಿದೆ. ಜನರನ್ನು ಎಷ್ಟೇ ದಾರಿ ತಪ್ಪಿಸಿದರೂ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖರಾದ ಪ್ರಸನ್ನ ಹಿರೇಮಠ, ಬಾಬುಸಾಬ ಮೋಮಿನಗಾರ, ಜಮೀರ್‌ ಜಿಗರಿ, ನಾಸೀರಖಾನ್‌ ಪಠಾಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!