ಕನ್ನಡಪ್ರಭ ವಾರ್ತೆ ಕಲಬುರಗಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿ ಕುರಿತಾಗಿ ಇದೇ 28ರಂದು ಜರುಗಲಿರುವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ನಿರ್ಧಾರ ಕೈಗೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಒಳಮೀಸಲಾತಿ ಜಾರಿಗೆ ಬಲಗೈ ಸಮುದಾಯವೂ ವಿರೋಧಿಸುತ್ತದೆ. ಅಂಬೇಡ್ಕರ್ ಆಶಯದಂತೆ ಎಲ್ಲರೂ ಸಮಾಜದಲ್ಲಿ ಬಾಳಬೇಕಾದರೆ ಈ ಮೀಸಲಾತಿ ನೀಡುವುದನ್ನು ಮತ್ತೊಮ್ಮೆ ಪರಿಶೀಲಿಸಲಿ ಮತ್ತು ನ್ಯಾಯಯುತವಾಗಿ ವರ್ಗೀಕರಣ ಮಾಡಬೇಕೆಂದು ಒತ್ತಾಯಿಸಿದರು.ನಮಗೆ ಶೇಕಡಾ 7ರಿಂದ 8ರಷ್ಟು ಮೀಸಲಾತಿ ಕೊಡುವುದಾಗಿ ಮಾತುಕತೆ ನಡೆಯುತ್ತಿದೆ. ಇಷ್ಟು ಕೊಡಲಿಕ್ಕೆ ನಾವೇನು ಕೂಲಿ ಮಾಡ್ತಿದ್ದೇವೆಯೇ? ನಮಗೆ 100ರಷ್ಟು ಮೀಸಲಾತಿ ಬೇಕು ಎಂದು ಹೇಳಿದ ಅವರು, ಈ ವಿಷಯವಾಗಿ ತಾವು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ ಮಾತನ್ನು ಕೇಳಲ್ಲ. ನಮಗೆ ಬೇಕಾದಷ್ಟು ಮೀಸಲಾತಿಗೆ ಅವರು ಒಪ್ಪಿದರೆ ನಾವು ಖರ್ಗೆ ಮಾತನ್ನು ಕೇಳುತ್ತೇವೆ. ಇಲ್ಲದಿದ್ದರೆ ಯಾರ ಮಾತೂ ಕೇಳುವುದಿಲ್ಲವೆಂದರು.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹಾಗೂ 2023ರ ಮಾ.27ರಂದು ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದಲ್ಲಿ ಆದಿ ಕರ್ನಾಟಕ (ಎಕೆ)ಜಾತಿಯನ್ನು ಬಲಗೈ ಮತ್ತು ಆದಿ ದ್ರಾವಿಡ (ಎಡಿ) ಜಾತಿಯನ್ನು ಮಾದಿಗ ಗುಂಪಿನಲ್ಲಿ ಸೇರಿಸಲಾಗಿದೆ. ಸರ್ಕಾರವು ಹೊಸದಾಗಿ ಜಾತಿಗಳ ಸಮೀಕ್ಷೆ ನಡೆಸುವುದೇ ಸಮಸ್ಯೆಗೆ ಪರಿಹಾರ ಎಂದು ಸಲಹೆ ನೀಡಿದರು.
34(1)ರಡಿಯಲ್ಲಿ ಜಾತಿ ಎಂದು ಪರಿಗಣಿಸಲ್ಪಟ್ಟ ಪದಗಳು ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಅಪ್ರಸ್ತುತವಾಗಿವೆ. ಮೂಲ ಜಾತಿ, ರಕ್ತ ಸಂಬಂಧ, ಜಾತಿಗಳ ಮದುವೆ ಸಂಬಂಧಗಳು ಮತ್ತು ಏಕರೂಪ ಲಕ್ಷಣಗಳ ಆಧಾರದ ಮೇಲೆ ಬಲಗೈ ಗುಂಪಿನಲ್ಲಿ ಒಂದೆ ಬಗೆಯ ಗುಣಲಕ್ಷಣಗಳನ್ನು ಹೊಂದಿರುವ ಸುಮಾರು 35 ಜಾತಿಗಳಿಗೆ ಹೊಲೆಯ, ಛಲವಾದಿ, ಬೇಗಾರ್, ಮಹಾರ್, ಮಾಲಾ, ಪರಯ್ಯ ಎಂದು ಕರೆಯುತ್ತಾರೆ. 98 ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂದರು.