ಅಧಿಕಾರಿಗಳು ಜನರ ಜತೆ ಸೌಜನ್ಯದಿಂದ ವರ್ತಿಸಲಿ

KannadaprabhaNewsNetwork |  
Published : Oct 26, 2024, 12:48 AM ISTUpdated : Oct 26, 2024, 12:49 AM IST
25ಜಿಯುಡಿ1ಅ | Kannada Prabha

ಸಾರಾಂಶ

ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಬರುವಂತಹವರು ಬಹುತೇಕರು ಬಡವರೇ ಆಗಿರುತ್ತಾರೆ. ಶ್ರೀಮಂತರು ಏಜೆಂಟ್ ಗಳ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರು ಅವರೇ ಖುದ್ದು ಕಚೇರಿಗಳಿಗೆ ಬರುತ್ತಾರೆ. ಆದರೆ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಕೆಲಸಗಳನ್ನು ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಬರುವಂತಹ ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸಿ, ಮಾಹಿತಿ ತಿಳಿಯದೇ ಇರುವಂತಹವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜನರ ಸೇವೆ ಮಾಡಬೇಕೆಂದು ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಪೊಲೀಸರ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಜನತೆ ಜತೆ ಸೌಜನ್ಯದಿಂದ ವರ್ತಿಸಿ

ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಬರುವಂತಹವರು ಬಹುತೇಕರು ಬಡವರೇ ಆಗಿರುತ್ತಾರೆ. ಶ್ರೀಮಂತರು ಏಜೆಂಟ್ ಗಳ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರು ಅವರೇ ಖುದ್ದು ಕಚೇರಿಗಳಿಗೆ ಬರುತ್ತಾರೆ. ಆದರೆ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಕಚೇರಿಯಲ್ಲಿನ ಅಧಿಕಾರಿಗಳು ಇತರೆ ಕೆಲಸಗಳ ನಿಮಿತ್ತ ಹೋದಾಗ ಕಚೇರಿಯಲ್ಲಿದ್ದ ಸಿಬ್ಬಂದಿ ಜನ ಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸಬೇಕು ಎಂದರು.

ಇನ್ನೂ ಸಭೆಯಲ್ಲಿ ಹೆಚ್ಚಾಗಿ ಕಂದಾಯ ಇಲಾಖೆ, ತಾಲೂಕು ಪಂಚಾಯತಿ ಗೆ ಸಂಬಂಧಿಸಿದಂತಹ ದೂರುಗಳು ಸಲ್ಲಿಕೆಯಾದವು. ಈ ದೂರುಗಳನ್ನು ಸ್ವೀಕರಿಸಿದ ಲೋಕಾಯುಕ್ತ ಎಸ್.ಪಿ. ಆಂಟೋನಿ ಸ್ಥಳದಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಆಡಳಿತ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ಸಭೆಯಲ್ಲಿ ಎಲ್ಲಾ ದೂರುಗಳು ಇತ್ಯರ್ಥವಾಗಿರಬೇಕು ಎಂದು ಸೂಚಿಸಿದರು.

ದೂರುಗಳನ್ನು ಇತ್ಯರ್ಥಪಡಿಸಿ

ಸಭೆಯಲ್ಲಿ 27 ದೂರುಗಳು ಬಂದಿದ್ದು, ಈ ಪೈಕಿ ಕಂದಾಯ ಇಲಾಖೆ 17, ತಾಲೂಕು ಪಂಚಾಯತಿ 3, ಆಹಾರ, ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ದ ದೂರುಗಳು ಬಂದವು. ಮುಂದಿನ ಸಭೆಯೊಳಗೆ ಎಲ್ಲಾ ದೂರುಗಳನ್ನುಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯ ಬಳಿಕ ಲೋಕಾಯುಕ್ತ ಪೊಲೀಸರು ಲಂಚ ಪಡೆದುಕೊಳ್ಳುವುದು ಹಾಗೂ ನೀಡುವುದು ತಪ್ಪು ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ವೇಳೆ ಲೋಕಾಯುಕ್ತ ಡಿ.ವೈ.ಎಸ್.ಪಿ. ದೇವೇಂದ್ರ ಕುಮಾರ್, ಇನ್ಸ್ಪೆಕ್ಟರ್ ಶಿವಪ್ರಸಾದ್, ತಹಸೀಲ್ದಾರ್ ಸಿಗ್ಬತ್ ವುಲ್ಲಾ, ತಾ.ಪಂ. ಇ.ಒ ಹೇಮಾವತಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಲಕ್ಷ್ಮೀಪತಿ ರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ