ಹಬ್ಬಕ್ಕೆ ಈ ಬಾರಿಯೂ ಬೆಂಗಳೂರು-ಕರಾವಳಿ ಪ್ರಯಾಣ ದರ ಹೆಚ್ಚಳ ಬರೆ!

KannadaprabhaNewsNetwork | Published : Oct 26, 2024 12:48 AM

ಸಾರಾಂಶ

ದೀಪಾವಳಿ ಹಬ್ಬ ಮಾತ್ರವಲ್ಲ ವಾರಾಂತ್ಯವೂ ಆಗಿರುವುದರಿಂದ ಖಾಸಗಿ ಟೂರಿಸ್ಟ್‌ ಬಸ್‌ ಹಾಗೂ ವಿಮಾನಯಾನದ ದರ ವಿಪರೀತ ಹೆಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕರಾವಳಿಗೆ 760ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳು ಸಂಚರಿಸಲಿದ್ದು, ಗ್ರಾಮೀಣ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವ ಇದೆ. ಈ ನಡುವೆ ಖಾಸಗಿ ಟೂರಿಸ್ಟ್‌ ಬಸ್‌ಗಳು ಕೂಡ ವಿಶೇಷ ಬಸ್‌ ಸಂಚಾರ ಏರ್ಪಡಿಸಿವೆ. ಖಾಸಗಿ ಟೂರಿಸ್ಟ್‌ ಬಸ್‌ಗಳು ಸೇರಿ ವಿಮಾನಯಾನದಲ್ಲೂ ಈ ಬಾರಿ ಪ್ರಯಾಣಿಕರಿಗೆ ದುಬಾರಿ ದರ ಹೆಚ್ಚಳದ ಬರೆ ಮುಂದುವರಿದಿದೆ.

ಕೆಸ್ಸಾರ್ಟಿಸಿ ಪುತ್ತೂರು ಹಾಗೂ ಮಂಗಳೂರು ವಿಭಾಗದಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಅ.30ರಂದು ಬೆಂಗಳೂರಿನಿಂದ ಕರಾವಳಿಗೆ ಹಾಗೂ ನ.3ರಂದು ಕರಾವಳಿಯಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ಬಸ್‌ಗಳು ಸಂಚರಿಸಲಿವೆ.

ಬೆಂಗಳೂರಿನಿಂದ ಅ.30ರಂದು ಪುತ್ತೂರು ವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಗಳಿಗೆ 60 ಬಸ್‌ಗಳು ಹಾಗೂ ಬಿಎಂಟಿಸಿಯ 60 ಬಸ್‌ಗಳು ವಿಶೇಷ ಸಂಚಾರ ನಡೆಸಲಿವೆ. ಇದೇ ಪ್ರಮಾಣದಲ್ಲಿ ಬಸ್‌ಗಳು ನವೆಂಬರ್‌ 3ರಂದು ವಾಪಸ್‌ ಬೆಂಗಳೂರಿಗೆ ನಿರ್ಗಮಿಸಲಿವೆ.

ಅ.30ರಂದು ಬೆಂಗಳೂರಿನಿಂದ ಮಂಗಳೂರು ವಿಭಾಗ ವ್ಯಾಪ್ತಿಯ ಮಂಗಳೂರು, ಉಡುಪಿ ಹಾಗೂ ಕುಂದಾಪುರಗಳಿಗೆ ವಿಭಾಗದ 546 ಬಸ್‌ಗಳಲ್ಲದೆ, 50 ಹೆಚ್ಚುವರಿ ಬಸ್‌ಗಳು ಆಗಮಿಸಲಿವೆ. ನ.3ರಂದು ಮತ್ತೆ ಈ ಬಸ್‌ಗಳು ಬೆಂಗಳೂರಿಗೆ ತೆರಳಲಿವೆ.

ಗ್ರಾಮೀಣ ಸಾರಿಗೆ ವ್ಯತ್ಯಾಸ:

ದೀಪಾವಳಿ ವಿಶೇಷ ಬಸ್‌ಗಳ ಓಡಾಟ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಬಸ್‌ಗಳ ವಿಪರೀತ ಕೊರತೆ ತಲೆದೋರುವ ಸಾಧ್ಯತೆ ಇದೆ. ದಸರಾ ವೇಳೆ ಗ್ರಾಮೀಣ ಭಾಗದ ಅಲ್ಲಲ್ಲಿ ಬಸ್‌ಗಳ ಕೊರತೆ ಉಂಟಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಆದರೂ ಸಾರಿಗೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಿದ್ದಾಗಿ ಸ್ಪಷ್ಟಪಡಿಸಿದ್ದರು. ಈ ಬಾರಿ ಕೂಡ ಗ್ರಾಮೀಣ ಸಾರಿಗೆಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ.2ರಂದು ಪುತ್ತೂರಿಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ವಿಭಾಗದ ಎಲ್ಲ ರೂಟ್‌ಗಳಲ್ಲೂ ಬಸ್‌ ಸಂಚಾರ ಇರಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕರಾವಳಿಯ ನಾನಾ ಕಡೆಗಳಿಗೆ ಆಗಮಿಸುವವರಿಗೆ ಕೆಎಸ್ಸಾರ್ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ಅ.30ರಂದು ಬೆಂಗಳೂರಿನಿಂದ ಕರಾವಳಿಗೆ, ನ.3ರಂದು ಮರಳಿ ಬೆಂಗಳೂರಿಗೆ ವಿಶೇಷ ಬಸ್‌ಗಳ ಸೌಲಭ್ಯ ಮಾಡಲಾಗಿದೆ. ಈ ವೇಳೆ ಗ್ರಾಮೀಣ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.

-ಜೈಶಾಂತ್‌ ಕುಮಾರ್‌, ಸಂಚಾರ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಪುತ್ತೂರುವಿಶೇಷ ಬಸ್‌ ಓಡಾಟಕ್ಕೆ ದರ ಹೆಚ್ಚಳ ಯಾಕೆ?

ಕೆಎಸ್ಸಾರ್ಟಿಸಿ ಅಥವಾ ಖಾಸಗಿ ಬಸ್‌ಗಳು ಹಬ್ಬಗಳ ವೇಳೆ ವಿಶೇಷ ಸಂಚಾರ ನಡೆಸುವುದಕ್ಕೆ ಹೆಚ್ಚುವರಿ ಟಿಕೆಟ್‌ ದರ ವಿಧಿಸುವುದು ಯಾಕೆ ಎಂಬ ಪ್ರಶ್ನೆಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕಾದರೆ, ಅಧಿಕ ವೆಚ್ಚ ತಗಲುತ್ತಾರೆ ಎನ್ನುವುದು ಅಧಿಕಾರಿಗಳ ಸಮಜಾಯಿಷಿ. ಬೆಂಗಳೂರಿನಿಂದ ಹೆಚ್ಚುವರಿ ಬಸ್‌ ಕರಾವಳಿಗೆ ಓಡಿಸಬೇಕಾದರೆ, ಕರಾವಳಿಯಿಂದ ಬೆಂಗಳೂರಿಗೆ ಖಾಲಿ ಬಸ್‌ ತೆರಳಬೇಕು. ಬರುವಾಗ ಮಾತ್ರ ಆದಾಯ, ವಾಪಸ್‌ ತೆರಳುವಾಗ ಆದಾಯ ಇದ್ದರೂ ಮತ್ತೆ ಮರಳುವಾಗ ಖಾಲಿ. ಹೀಗಾಗಿ ಹೆಚ್ಚುವರಿ ಶೇ.20ರಷ್ಟು ದರ ವಿಧಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿ.

ಆದರೆ ಖಾಸಗಿ ಬಸ್‌ನಲ್ಲಿ ಸೀಮಿತ ದರ ಏರಿಕೆ ಎಂಬುದಿಲ್ಲ. ಅದರ ಬದಲು ನಾಲ್ಕೈದು ಪಟ್ಟು ದರ ವಸೂಲಿ ಮಾಡುತ್ತಾರೆ ಎನ್ನುವುದು ಪ್ರಯಾಣಿಕರ ಆರೋಪ. ಪ್ರಯಾಣಿಕರ ದೂರು ಬಂದಾಗ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ, ಬೇಕಾಬಿಟ್ಟಿ ದರ ಏರಿಕೆಯನ್ನು ಹತೋಟಿಗೆ ತರಲು ಯಾವುದೇ ಕ್ರಮಗಳಾಗುತ್ತಿಲ್ಲ ಎನ್ನುವುದು ಪ್ರಯಾಣಿಕರ ಬೇಸರದ ನುಡಿ. ಟೂರಿಸ್ಟ್‌ ಬಸ್‌, ವಿಮಾನಯಾನ ದರ ಹೆಚ್ಚಳ ಪೈಪೋಟಿ!

ದೀಪಾವಳಿ ಹಬ್ಬ ಮಾತ್ರವಲ್ಲ ವಾರಾಂತ್ಯವೂ ಆಗಿರುವುದರಿಂದ ಖಾಸಗಿ ಟೂರಿಸ್ಟ್‌ ಬಸ್‌ ಹಾಗೂ ವಿಮಾನಯಾನದ ದರ ವಿಪರೀತ ಹೆಚ್ಚಳವಾಗಿದೆ.

ಅ.30ರಂದು ಖಾಸಗಿ ಟೂರಿಸ್ಟ್‌ ಬಸ್‌ಗಳು ಬೆಂಗಳೂರಿನಿಂದ ಮಂಗಳೂರಿಗೆ ಕನಿಷ್ಠ 1,500 ರು.ನಿಂದ ಗರಿಷ್ಠ 3,249 ರು. ವರೆಗೆ ದರ ವಿಧಿಸಿವೆ. ನ.3ರಂದು ಮಂಗಳೂರಿನಿಂದ ಬೆಂಗಳೂರಿಗೆ ಕೂಡ ಇದೇ ರೀತಿಯ ದುಬಾರಿ ದರ ಇದೆ.

ಅ.30ರಂದು ವಿಮಾನಯಾನ ಸಂಸ್ಥೆಗಳು ಕೂಡ ಬೆಂಗಳೂರು-ಮಂಗಳೂರು ನಡುವೆ ಕನಿಷ್ಠ 3,829 ರು.ನಿಂದ ಗರಿಷ್ಠ 5,620 ರು. ವರೆಗೆ ದರ ಪ್ರಕಟಿಸಿವೆ. ನ.3ರಂದು ಮಂಗಳೂರಿನಿಂದ ಬೆಂಗಳೂರಿಗೆ ಕನಿಷ್ಠ 5,153 ರು.ನಿಂದ ಗರಿಷ್ಠ 17,757 ರು. ವರೆಗೆ ವಿಪರೀತ ದರ ಹೆಚ್ಚಳ ನಮೂದಿಸಿವೆ.

Share this article