ಶಿಗ್ಗಾಂವಿ ಉಪಚುನಾವಣೆಯಲ್ಲಿ ಕೈಗೆ ಬಂಡಾಯದ ಬಿಸಿ

KannadaprabhaNewsNetwork |  
Published : Oct 26, 2024, 12:48 AM IST
ಪೋಟೋ ಇದೆ. | Kannada Prabha

ಸಾರಾಂಶ

ಶಿಗ್ಗಾಂವಿ ಉಪದಕನ ತುರುಸು ಪಡೆದುಕೊಳ್ಳುತ್ತಿದ್ದು, ಆರಂಭದಲ್ಲೇ ಕಾಂಗ್ರೆಸ್ಸಿಗೆ ಬಂಡಾಯದ ಬಿಸಿ ತಗುಲಿದೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಮಾಡಿದ್ದ ಅಜ್ಜಂಪೀರ್ ಖಾದ್ರಿ ಬಂಡಾಯ ಎದ್ದಿದ್ದು, ಮಾಜಿ ಸಂಸದ ಮಂಜುನಾಥ ಕುನ್ನೂರ ಕೂಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹಾವೇರಿ:ಶಿಗ್ಗಾಂವಿ ಉಪದಕನ ತುರುಸು ಪಡೆದುಕೊಳ್ಳುತ್ತಿದ್ದು, ಆರಂಭದಲ್ಲೇ ಕಾಂಗ್ರೆಸ್ಸಿಗೆ ಬಂಡಾಯದ ಬಿಸಿ ತಗುಲಿದೆ. ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ಮಾಡಿದ್ದ ಅಜ್ಜಂಪೀರ್ ಖಾದ್ರಿ ಬಂಡಾಯ ಎದ್ದಿದ್ದು, ಮಾಜಿ ಸಂಸದ ಮಂಜುನಾಥ ಕುನ್ನೂರ ಕೂಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಕೆ ಭರಾಟೆಯೊಂದಿಗೆ ಕಾಂಗ್ರೆಸ್ಸಿನ ಆಂತರಿಕ ಭಿನ್ನಮತವೂ ಸ್ಫೋಟಗೊಂಡಿತು. ಗುರುವಾರವಷ್ಟೇ ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್‌ ಫೈನಲ್‌ ಮಾಡಿತ್ತು. ಯಾಸೀರ್‌ಖಾನ್ ಪಠಾಣ್‌ಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅತೃಪ್ತಿ ಹೊರಹಾಕಿದ್ದರು. ಅವರು ಬೆಂಗಳೂರಿನಿಂದ ಶಿಗ್ಗಾಂವಿಗೆ ಬರುವ ವೇಳೆಗೆ ಬೆಂಬಲಿಗರು ಪಕ್ಷದ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಅಜ್ಜಂಪೀರ್ ಖಾದ್ರಿ ಬೆಂಬಲಿಗರ ಸಂಖ್ಯೆ ಹೆಚ್ಚಿದೆ. ಆದರೆ, ನಾಲ್ಕು ಸಲ ಸೋತಿದ್ದಾರೆ ಎಂಬ ಕಾರಣಕ್ಕೆ ಪಕ್ಷ ಈ ಸಲ ಟಿಕೆಟ್‌ ನಿರಾಕರಿಸಿರುವುದು ಸಹಜವಾಗಿಯೇ ಖಾದ್ರಿಯವರನ್ನು ಕೆರಳಿಸುವಂತೆ ಮಾಡಿದೆ. ಖಾದ್ರಿ ಬಂಡಾಯವಾಗಿ ಕಣಕ್ಕಿಳಿಯುವ ಮುನ್ಸೂಚನೆ ಅರಿತು ಶುಕ್ರವಾರ ಬೆಳಗ್ಗೆಯೇ ಸಚಿವ ಜಮೀರ್ ಅಹ್ಮದ್‌ ಅವರು ಆಗಮಿಸಿದ್ದರು. ಖಾದ್ರಿಯವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಬೆಂಬಲಿಗರು, ಕಾರ್ಯಕರ್ತರ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಕಹಳೆ ಮೊಳಗಿಸಿದರು.

ನಾಮಪತ್ರ ವಾಪಸ್‌ ಪಡೆಯಲು ಅ.30 ಕೊನೆಯ ದಿನವಾಗಿದ್ದು, ಅಷ್ಟರೊಳಗಾಗಿ ಅವರ ಮುನಿಸು ಶಮನ ಮಾಡುವ ಪ್ರಯತ್ನವನ್ನು ಕೈ ನಾಯಕರು ಮಾಡುವ ಸಾಧ್ಯತೆಗಳಿವೆ. ಆದರೆ, ಖಾದ್ರಿ ಬೆಂಬಲಿಗರು ಪಠಾಣ್‌ ಬೆಂಬಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಕಾರಣ, ಈ ಹಿಂದೆ ಇಬ್ಬರ ಬೆಂಬಲಿಗರ ನಡುವೆ ಹಲವು ಕಾರ್ಯಕ್ರಮಗಳಲ್ಲಿ ಶಕ್ತಿ ಪ್ರದರ್ಶನವಾಗಿವೆ. ಮುಖಂಡರು ಒಂದಾದರೂ ಕಾರ್ಯಕರ್ತರು ಒಂದಾಗುವ ಲಕ್ಷಣ ಕಾಣುತ್ತಿಲ್ಲ. ಅಷ್ಟರಮಟ್ಟಿಗೆ ಇಬ್ಬರ ಬೆಂಬಲಿಗರ ನಡುವೆ ವೈಷಮ್ಯ ಬೆಳೆದಿದೆ ಎಂದು ಹೇಳಲಾಗುತ್ತಿದೆ.

ಇನ್ನು ಮಾಜಿ ಸಂಸದ ಮಂಜುನಾಥ ಕುನ್ನೂರ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್‌ಗೆ ಶಾಕ್ ನೀಡಿದೆ. ಈ ಸಲದ ಟಿಕೆಟ್‌ ರೇಸ್‌ನಲ್ಲಿ ಮಂಜುನಾಥ ಕುನ್ನೂರ ಪುತ್ರ ರಾಜು ಕೂಡ ಇದ್ದರು. ಈ ಸಲ ಲಿಂಗಾಯತರಿಗೆ ಟಿಕೆಟ್‌ ನೀಡುವುದಾದರೆ ಪಂಚಮಸಾಲಿ ಸಮುದಾಯದ ರಾಜು ಕುನ್ನೂರಗೆ ನೀಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆದಿತ್ತು. ಇದರಿಂದ ಒಂದು ಹಂತದಲ್ಲಿ ರಾಜು ಕುನ್ನೂರ ಹೆಸರು ಮುಂಚೂಣಿಗೆ ಬಂದಿತ್ತು. ಈಗ ಟಿಕೆಟ್‌ ಆಕಾಂಕ್ಷಿಯಾಗಿದ್ದ ಪುತ್ರ ರಾಜು ತಣ್ಣಗಿದ್ದರೆ, ಅಪ್ಪ ಮಂಜುನಾಥ ಕುನ್ನೂರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್‌ಗೆ ಡಬಲ್ ಶಾಕ್‌ ಕೊಟ್ಟಂತಾಗಿದೆ. ಮಂಜುನಾಥ ಕುನ್ನೂರ ಅವರು ಈ ಹಿಂದೆ ಎರಡು ಸಲ ಶಿಗ್ಗಾಂವಿ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

Recommended Stories

ಕಲಬುರಗಿ: ಬಿಜೆಪಿ ನಾಯಕರಿಂದ ‘ಐ ಲವ್‌ ಆರೆಎಸ್ಸೆಸ್‌’ ಅಭಿಯಾನ
ಆರೆಸ್ಸೆಸ್‌ ನಿಷೇಧಕ್ಕೆ ಹೇಳಿಲ್ಲ : ಪ್ರಿಯಾಂಕ್