1878ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಮನೋರಂಜನೆಗಾಗಿ ಹುಟ್ಟಿಕೊಂಡಂತ ಮದ್ಯಪಾನ ಅಭ್ಯಾಸದಿಂದ ಇಂದು ವ್ಯಾಸನಿಗಳಾಗುತ್ತಿದ್ದಾರೆ. ಹಿಂದೆ ಗಂಡಸರು ಮಾತ್ರ ಕುಡಿಯುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಹೆಂಗಸರು ಕುಡಿಯುತ್ತಿರುವುದು ವಿಪರ್ಯಾಸ ಎಂದು ಜಯಪುರ ಪೊಲೀಸ್ ಠಾಣಾಧಿಕಾರಿ ಅಂಬರೀಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಪ್ರಗತಿ ಬಂಧು ಸ್ವಸಾಯ ಸಂಘಗಳ ಒಕ್ಕೂಟಗಳು ಜಯಪುರ ವಲಯ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 1878ನೇ ಮದ್ಯವರ್ಜನ ಶಿಬಿರ ಜಯಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಕ್ಕಿ ಕೊಪ್ಪ ಶ್ರೀ ಸತ್ಯಸಾಯಿ ನಿಕೇತನ ಸೇವಾ ಮಂದಿರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 17 ಆತ್ಮಹತ್ಯೆಗಳಾಗಿದ್ದು, ಅದರಲ್ಲಿ 10 ಜನ ಮದ್ಯಪಾನದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೃಂಗೇರಿ ವಲಯದ ಮೇಲ್ವಿಚಾರಕ ನಾಗರಾಜ್ ಮಾತನಾಡಿ ಓರ್ವ ವ್ಯಕ್ತಿ ತನ್ನ ಶ್ರಮವನ್ನ ಹಾಕಿ ದುಡಿಯುತ್ತಾನೆ. ಆ ದುಡಿಮೆಯಿಂದ ಬಂದ ಹಣ ಮನೆ ತಲುಪುವ ಬದಲು ಮದ್ಯದ ಅಂಗಡಿ ತಲುಪುತ್ತಿದೆ. ಇದರಿಂದ ಆತನ ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ಮದ್ಯಪಾನಕ್ಕೆ ಶರಣಾದ ವ್ಯಕ್ತಿ ಮೊದಲು ಕುಡಿಯುವುದನ್ನು ಬಿಡುತ್ತೇನೆ ಎಂದು ಸಂಕಲ್ಪ ಮಾಡಬೇಕು. ನಮ್ಮ ಯೋಜನೆ ಮೂಲಕ ಸುಮಾರು 1877 ಶಿಬಿರಗಳನ್ನು ಈಗಾಗಲೇ ನಡೆಸಿದೆ. ಒಂದು 1.25ಲಕ್ಷ ಜನರು ಕುಡಿತ ಬಿಟ್ಟಿದ್ದಾರೆ. ಇಂದಿನ ಶಿಬಿರ 1878ನೇ ಶಿಬಿರವಾಗಿದೆ. ಶಿಬಿರದಲ್ಲಿ ಆಣೆ ಪ್ರಮಾಣ ಮುಖಾಂತರ ಚಟ ಬಿಡಿಸುತ್ತಾರೆ ಎಂಬ ತಪ್ಪು ಮಾಹಿತಿ ಕೆಲವರು ನೀಡುತ್ತಿದ್ದಾರೆ. ಶಿಬಿರದಲ್ಲಿ ಯಾವುದೇ ಆಣೆ ಪ್ರಮಾಣ ಮಾಡಿಸುವುದಿಲ್ಲ. ಬದಲಿಗೆ ವ್ಯಕ್ತಿಗಳಿಗೆ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಉತ್ತಮ ಸಂದೇಶ ನೀಡುವ ಮುಖಾಂತರ ಜೀವನದ ಅರಿವು ಮೂಡಿಸುತ್ತೇವೆ. ಈ ಮುಖಾಂತರ ದುಷ್ಟಚಟಗಳನ್ನು ಬಿಡುವಂತಹ ಸಂಕಲ್ಪ ಶಿಬಿರಾರ್ಥಿಗಳಿಗೆ ನೀಡುತ್ತೇವೆ ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಎಚ್. ಎಂ. ಸತೀಶ್ ಮಾತನಾಡಿ ಮಾನವ ಸೇವೆ ಮಾದವ ಸೇವೆ, ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡುವುದು ಹಾಗೂ ಬಯಸುವುದು ನಮ್ಮೆಲ್ಲರ ಕರ್ತವ್ಯ. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಒಂದು ಊರು ಅಭಿವೃದ್ಧಿಯಾಗಬೇಕಾರೆ ಆ ಊರಿನಲ್ಲಿ ಶಾಲೆ, ದೇವಸ್ಥಾನ ಬೆಳವಣಿಗೆ ಆಗಬೇಕು. ಪ್ರತಿಯೊಬ್ಬರೂ ಮದ್ಯಪಾನದಿಂದ ದೂರವಿರಬೇಕು ಎಂದರು.ಗೌರವಾಧ್ಯಕ್ಷ ಜಯಂತ್ ಭಟ್ಟರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸದಾನಂದ ಬಂಗೇರ, ಅರವಿಂದ ಸೋಮಯಾಜಿ, ಡಿ. ಬಿ. ರಾಜೇಂದ್ರ, ಗೋಪಾಲಕೃಷ್ಣ, ಶ್ರೀನಿವಾಸಗೌಡರು, ಮಂಜುನಾಥ ಗೌಡರು, ಲಲಿತಾ, ಸಂಪತ್ ಕುಮಾರ್, ಜಯ ಮುರುಗೇಶ್, ಶಾಂತ ಕುಮಾರ ಜೈನ್, ಬಾಲಕೃಷ್ಣ ಭಟ್, ಶ್ರೀಮೂರ್ತಿ ಶೆಟ್ಟಿ, ಜಯಪುರ ವಲಯದ ಮೇಲ್ವಿಚಾರಕರಾದ ಮನೋಹರ್ ರಾಜೇಶ್ ನಾಯಕ್ ಇದ್ದರು.