ಕಾಂಗ್ರೆಸ್ಸಿಗೆ ವಿರೋಧ ಪಕ್ಷ ಸ್ಥಾನವೂ ಸಿಗದು: ಹಾಲಪ್ಪ ಆಚಾರ ಟೀಕೆ

KannadaprabhaNewsNetwork | Published : Apr 21, 2024 2:17 AM

ಸಾರಾಂಶ

ಸೋಲುತ್ತೇವೆ ಎಂದು ಮೊದಲೇ ತಿಳಿದು ಇಂಡಿಯಾ ಮೈತ್ರಿ ಕೂಡ ಮಾಡಿಕೊಂಡಿದೆ.

ಲೋಕಸಭಾ ಚುನಾವಣಾ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಕುಕನೂರು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 200 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಸೋಲುತ್ತೇವೆ ಎಂದು ಮೊದಲೇ ತಿಳಿದು ಇಂಡಿಯಾ ಮೈತ್ರಿ ಕೂಡ ಮಾಡಿಕೊಂಡಿದೆ. ಲೆಕ್ಕಾಚಾರ ಹಾಕಿದರೆ ಕಾಂಗ್ರೆಸ್ಸಿಗೆ ವಿರೋಧ ಪಕ್ಷದ ಸ್ಥಾನವೂ ಸಿಗದು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಟೀಕಿಸಿದರು.

ತಾಲೂಕಿನ ತಳಕಲ್, ಇಟಗಿ ಗ್ರಾಮದಲ್ಲಿ ಜರುಗಿದ ಲೋಕಸಭಾ ಚುನಾವಣಾ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕೆ ಸ್ಥಾನಮಾನ ದೊರೆಯದು. ಸಿಎಂ ಸಿದ್ದರಾಮಯ್ಯ ಬರೀ ಪುಂಗಿ ಊದುತ್ತಾರೆ. ಈ ಹಿಂದೆ ಕೃಷ್ಣ ಕೊಳ್ಳದ ಯೋಜನೆಗಳಿಗೆ ವರ್ಷಕ್ಕೆ ₹10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಮಾತಿನಂತೆ ನಡೆದುಕೊಳ್ಳಲಿಲ್ಲ. ರೈತರಿಗೆ ಅನುಕೂಲ ಆಗಲೆಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರದ ₹6 ಸಾವಿರದ ಜೊತೆಗೆ ರಾಜ್ಯ ಸರ್ಕಾರದಿಂದ ₹4 ಸಾವಿರ ಹಣವನ್ನು ರೈತರಿಗೆ ಪಿಎಂ ಕಿಸಾನ್ ಯೋಜನೆಯಲ್ಲಿ ಹಾಕುತ್ತಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಇದನ್ನು ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸ್ವಾಭಿಮಾನದ ಬದುಕು ಕಟ್ಟಿಕೊಡುವುದಿಲ್ಲ. ಇದರಿಂದ ರಾಜ್ಯಕ್ಕೆ ಲಾಭವಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂಗಳನ್ನು ರಾಜ್ಯ ಸರ್ಕಾರ ಸಾಲ ಪಡೆದಿದೆ. ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಯೋಜನೆ ತಂದಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಮಾತನಾಡಿ, ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವಗುರು ಮಾಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಭಾರತ ಬಡರಾಷ್ಟ್ರವೆಂದು ಬಿಂಬಿತವಾಗಿತ್ತು. ಆದರೆ ಮೋದಿ ಅವರಿಂದ ಭಾರತ ವಿಶ್ವಮಟ್ಟದಲ್ಲಿ ಹಿರಿಯ ಸ್ಥಾನ ಪಡೆದಿದೆ. ಮೋದಿಯಿಂದ 25 ಕೋಟಿ ಜನರ ಬಡತನ ನಿರ್ಮೂಲನೆ ಆಗಿದೆ. 38 ಕೋಟಿ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಎಂಎಲ್ಸಿ ಹೇಮಲತಾ ನಾಯಕ, ಜೆಡಿಎಸ್ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿದರು.

ಪ್ರಮುಖರಾದ ಬಸಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಜಗನ್ನಾಥಗೌಡ ಪಾಟೀಲ್, ಬಸವರಾಜ ಗುಳಗುಳ್ಳಿ, ಸಿ.ಎಚ್. ಪೊಪಾ, ಗೌರಾ ಬಸವರಾಜ, ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಶಿವಪ್ಪವಾದಿ, ಶರಣಪ್ಪ ರಾಮಪೂರು, ಉಮೇಶಗೌಡ, ಗವಿಸಿದ್ದಪ್ಪ ಮುದ್ದಾಬಳ್ಳಿ, ಮಹೇಶ ಹಿರೇಮನಿ, ನಾಗರಾಜ ವೆಂಕಟಾಪೂರ ಇತರರಿದ್ದರು.

ಮೋದಿಯಿಂದ ಸಂಸ್ಕೃತಿ ಹೆಚ್ಚಳ:

ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತದ ಸಂಸ್ಕೃತಿ ಮತ್ತು ಪರಂಪರೆ ಹೆಚ್ಚಿದೆ ಎಂದು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಹೇಳಿದರು. ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರಿಂದ ಪ್ರತಿ ಕ್ಷೇತ್ರ ಅಭಿವೃದ್ಧಿ ಆಗಿದೆ. ಕಾಮಗಾರಿಗಳು ವೇಗ ಪಡೆದಿವೆ. ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ರೈತರು ಸಬಲರಾಗಿದ್ದಾರೆ, ಬಡವರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

Share this article