ಆರೂ ಮೇಲ್ಮನೆ ಕ್ಷೇತ್ರ ಗೆಲ್ಲುತ್ತೇವೆ: ಸಿದ್ದರಾಮಯ್ಯ

KannadaprabhaNewsNetwork | Updated : May 14 2024, 12:05 PM IST

ಸಾರಾಂಶ

ರಾಜ್ಯದಲ್ಲಿ ಆರು ಕ್ಷೇತ್ರಗಳಿಗೆ ನಡೆಯುತ್ತಿರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಆರೂ ಕ್ಷೇತ್ರವನ್ನೂ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು :  ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳಾದ ಆಗ್ನೇಯ ಶಿಕ್ಷಕರ ಕ್ಷೇತ್ರದ ಟಿ.ಡಿ. ಶ್ರೀನಿವಾಸ್‌ ಮತ್ತು ಬೆಂಗಳೂರು ಪದವೀಧರರ ಕ್ಷೇತ್ರದ ರಾಮೋಜಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ‘ಆರು ಕ್ಷೇತ್ರಗಳಲ್ಲಿ ಆರೂ ಕ್ಷೇತ್ರವನ್ನೂ ಕಾಂಗ್ರೆಸ್‌ ಗೆಲ್ಲಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಂತಿನಗರದಲ್ಲಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಟಿ.ಡಿ. ಶ್ರೀನಿವಾಸ್‌ ಹಾಗೂ ರಾಮೋಜಿಗೌಡ ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ಆರೂ ಕ್ಷೇತ್ರಗಳಲ್ಲೂ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಹೀಗಾಗಿ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಆರು ತಿಂಗಳ ಹಿಂದೆಯೇ ಘೋಷಿಸಿದ್ದೆವು. ಜತೆಗೆ ನಮ್ಮ ಸರ್ಕಾರದ ಜನಪರ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರ ಕಾರ್ಯಕ್ರಮಗಳಿಂದಾಗಿ ಮತದಾರರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬೆಂಗಳೂರಿಗೆ ಸಂಬಂಧಿಸಿದಂತೆ ಟಿ.ಡಿ. ಶ್ರೀನಿವಾಸ್‌ ಹಾಗೂ ರಾಮೋಜಿಗೌಡ ಈಗಾಗಲೇ ಎಲ್ಲಾ ಮತದಾರರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇಬ್ಬರೂ ಸಮರ್ಥ ಅಭ್ಯರ್ಥಿಗಳು. ಶ್ರೀನಿವಾಸ್ ಅವರು ಶಿಕ್ಷಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರ ಧ್ವನಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಉಳ್ಳವರು. ರಾಮೋಜಿ ಗೌಡ ಅವರೂ ಶಿಕ್ಷಕರಾಗಿ ಕೆಲಸ ಮಾಡಿದ್ದವರು. ಅವರಿಗೂ ಪದವೀಧರರ ಸಮಸ್ಯೆಗಳ ಬಗ್ಗೆ ಅರಿವಿದೆ. ಅವುಗಳನ್ನು ಬಗೆಹರಿಸುವ ಶಕ್ತಿ ಅವರಿಗಿದೆ. ಹಾಗಾಗಿ ಇಬ್ಬರೂ ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದರು.ಬಿಜೆಪಿಯಿಂದ ಆಗದ ಕೆಲಸ ನಮ್ಮ ಕಾಲದಲ್ಲಾಗಿದೆ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಿಜೆಪಿಯಿಂದ ಆಗದ ಕೆಲಸವನ್ನು ನಮ್ಮ ಕಾಲದಲ್ಲಿ ಮಾಡಿದ್ದೇವೆ. ಹೀಗಾಗಿ ಶಿಕ್ಷಕರು ಹಾಗೂ ಪದವೀಧರರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದ ಎಲ್ಲವನ್ನೂ ಈಡೇರಿಸಿದ್ದೇವೆ. ಹೀಗಾಗಿ ಆರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಸಚಿವರಾದ ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಸಂಸದ ಡಿ.ಕೆ. ಸುರೇಶ್, ಪರಿಷತ್‌ ಸದಸ್ಯ ನಸೀರ್ ಅಹಮದ್‌ ಸೇರಿದಂತೆ ಹಲವರು ಹಾಜರಿದ್ದರು.

Share this article