ಶಿಗ್ಗಾಂವಿಯಲ್ಲಿ ಕೈ ಜಯಭೇರಿ, ಖಾದ್ರಿಗೆ ಸರ್ಕಾರದಿಂದ ಗಿಫ್ಟ್‌

KannadaprabhaNewsNetwork | Published : Nov 26, 2024 12:46 AM

ಸಾರಾಂಶ

ಶಿಗ್ಗಾಂವಿ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ ಜಯಭೇರಿ ಬಾರಿಸಲು ಪ್ರಮುಖ ಕಾರಣೀಕರ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಪಕ್ಷದ ನಾಯಕರು ಹೆಸ್ಕಾಂ ಅಧ್ಯಕ್ಷ ಹುದ್ದೆಯ ಗಿಫ್ಟ್‌ ನೀಡಿದ್ದಾರೆ.

ಹಾವೇರಿ: ಶಿಗ್ಗಾಂವಿ ಉಪಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ ಜಯಭೇರಿ ಬಾರಿಸಲು ಪ್ರಮುಖ ಕಾರಣೀಕರ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಪಕ್ಷದ ನಾಯಕರು ಹೆಸ್ಕಾಂ ಅಧ್ಯಕ್ಷ ಹುದ್ದೆಯ ಗಿಫ್ಟ್‌ ನೀಡಿದ್ದಾರೆ.

ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಅವರನ್ನು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಶಿಗ್ಗಾಂವಿ ಉಪಚುನಾವಣೆ ಸಂದರ್ಭದಲ್ಲಿ ಬಂಡಾಯವೆದಿದ್ದ ಖಾದ್ರಿ ಅವರನ್ನು ಮನವೊಲಿಸಿ ಸೂಕ್ತ ಸ್ಥಾನಮಾನದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವ ಜಮೀರ್‌ ಅಹ್ಮದ್‌ ಸೇರಿದಂತೆ ಕೈ ನಾಯಕರು ನೀಡಿದ್ದರು. ಅದರಂತೆ ಫಲಿತಾಂಶ ಬಂದ ಎರಡೇ ದಿನದಲ್ಲಿ ಖಾದ್ರಿ ಅವರಿಗೆ ಹೆಸ್ಕಾಂ ಅಧ್ಯಕ್ಷ ಹುದ್ದೆ ನೀಡುವ ಮೂಲಕ ಕೈ ನಾಯಕರು ಮಾತು ಉಳಿಸಿಕೊಂಡಿದ್ದಾರೆ.

ಖಾದ್ರಿ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಬಹುದು ಎಂದು ಹೇಳಲಾಗುತ್ತಿದ್ದರೂ ಸದ್ಯಕ್ಕೆ ಉತ್ತಮ ಹುದ್ದೆಯನ್ನೇ ಪಕ್ಷ ನೀಡಿರುವುದಕ್ಕೆ ಖಾದ್ರಿ ಬೆಂಬಲಿಗರಲ್ಲಿ ಸಮಾಧಾನ ಮೂಡಿದೆ.

ಪಕ್ಷ ನಿಷ್ಠೆ, ಜನ ಬೆಂಬಲ: ಅಜ್ಜಂಪೀರ್ ಖಾದ್ರಿ ಅವರು ನಾಲ್ಕು ಚುನಾವಣೆಗಳಲ್ಲಿ ಸೋತಿದ್ದರೂ ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಅವರ ಜನಪ್ರಿಯತೆ ಕುಂದಿಲ್ಲ ಎನ್ನುವುದಕ್ಕೆ ಉಪಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ಮೂರು ಸಲ ಬಸವರಾಜ ಬೊಮ್ಮಾಯಿ ವಿರುದ್ಧ ಸೋತಿದ್ದರೂ 8ರಿಂದ 10 ಸಾವಿರ ಮತಗಳ ಅಂತರದಿಂದ ಎಂಬುದು ಗಮನಾರ್ಹ. ಆದ್ದರಿಂದ ಈ ಸಲ ಪಕ್ಷ ಟಿಕೆಟ್‌ ನೀಡಿದರೆ ಗೆಲುವು ನಿಶ್ಚಿತ ಎಂದು ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹ್ಮದ್‌ ಸೇರಿದಂತೆ ಹಲವರು ಖಾದ್ರಿ ಪರವಾಗಿಯೇ ಇದ್ದರು. ಆದರೆ, ನಾನಾ ಕಾರಣಗಳಿಂದ ಟಿಕೆಟ್‌ ಕೈತಪ್ಪಿದಾಗ ಖಾದ್ರಿ ಬಂಡಾಯದ ಮುನ್ಸೂಚನೆ ಅರಿತು ಸಚಿವ ಜಮೀರ್ ಅಹ್ಮದ್‌ ಅವರನ್ನು ಕಳುಹಿಸಲಾಗಿತ್ತು. ಆದರೂ ಕೊನೆ ಗಳಿಗೆಯಲ್ಲಿ ಓಡೋಡಿ ಬಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಖಾದ್ರಿ ಬಂಡಾಯ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿತ್ತು. ಅಷ್ಟರಲ್ಲಾಗಲೇ ಕ್ಷೇತ್ರದಲ್ಲಿ ಖಾದ್ರಿ ಸಾಮರ್ಥ್ಯದ ಅರಿವು ಕೈ ನಾಯಕರಿಗೆ ಆಗಿತ್ತು. ಖಾದ್ರಿ ಇಲ್ಲದೇ ಚುನಾವಣೆ ಎದುರಿಸುವುದು ಕಷ್ಟ ಎಂಬ ವಾಸ್ತವ ಅರಿವಾಗಿತ್ತು. ಆಗ ಖಾದ್ರಿ ಅವರ ಮನವೊಲಿಸಲು ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಪ್ರಯತ್ನಿಸಿದರು. ಖಾದ್ರಿಯೊಂದಿಗೆ ನಡೆದ ಸಂಧಾನದ ವೇಳೆ ಸೂಕ್ತ ಸ್ಥಾನಮಾನದ ಭರವಸೆಯನ್ನು ನಾಯಕರು ನೀಡಿದ್ದರು. ನಾಯಕರ ಮಾತಿಗೆ ಕಟ್ಟುಬಿದ್ದ ಖಾದ್ರಿ ನಾಮಪತ್ರ ವಾಪಸ್‌ ಪಡೆದು ಯಾಸೀರ್‌ ಖಾನ್‌ ಪಠಾಣ್‌ ಪರ ಪ್ರಚಾರ ನಡೆಸಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೆಚ್ಚಿದ ಖಾದ್ರಿ ವರ್ಚಸ್ಸು: ಉಪಚುನಾವಣೆಯಿಂದ ರಾಜ್ಯಮಟ್ಟದಲ್ಲಿ ಅಜ್ಜಂಪೀರ್ ಖಾದ್ರಿ ವರ್ಚಸ್ಸು ಹೆಚ್ಚಿತು ಎನ್ನಬಹುದು. ಅಲ್ಲದೇ ಪಕ್ಷದ ನಾಯಕರು ಇಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ನಾಮಪತ್ರ ಹಿಂಪಡೆದ ಬಳಿಕ ಖಾದ್ರಿ ಅವರು ಪಠಾಣ್‌ರನ್ನು ಎಷ್ಟರಮಟ್ಟಿಗೆ ಬೆಂಬಲಿಸಲಿದ್ದಾರೆ ಎಂಬ ಅನುಮಾನ ಸಹಜವಾಗಿಯೇ ಎಲ್ಲರಲ್ಲಿತ್ತು. ಆದರೆ, ಎಲ್ಲಿಯೂ ತಮ್ಮ ಅಸಮಾಧಾನ ಹೊರಹಾಕದೇ ಪಕ್ಷದ ಗೆಲುವಿಗಾಗಿ ಶ್ರಮಿಸಿದರು. ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ ಮತ ಗಳಿಸಿರುವುದರ ಹಿಂದೆ ಖಾದ್ರಿ ಪಾತ್ರವೂ ಇದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಖಾದ್ರಿ ಇನ್ನೂ ಹತ್ತಿರರಾಗಿದ್ದಾರೆ. ಅದಕ್ಕಾಗಿಯೇ ಹೆಸ್ಕಾಂ ಅಧ್ಯಕ್ಷ ಪಟ್ಟವನ್ನು ನೀಡಿ ಸರ್ಕಾರ ಖಾದ್ರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದೆ.

ಹೆಸ್ಕಾಂ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿ ಆದೇಶ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರು, ಪಕ್ಷದ ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಮತ್ತು ಸರ್ಕಾರಕ್ಕೆ ಉತ್ತಮ ಹೆಸರು ಬರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಚುನಾವಣೆ ವೇಳೆ ನನಗೆ ಯಾವುದೇ ಭರವಸೆಯನ್ನು ನೀಡಿರಲಿಲ್ಲ. ಈಗ ನೀಡಿರುವ ಹುದ್ದೆ ತೃಪ್ತಿಯಿದೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದ್ದಾರೆ.

Share this article