ಕರ್ನಾಟಕದಲ್ಲಿ 5 ಗ್ಯಾರಂಟಿಗಳಿಂದ ಕಾಂಗ್ರೆಸ್‌ ಜನಮನ ಗೆದ್ದಿದೆ

KannadaprabhaNewsNetwork |  
Published : Oct 06, 2023, 12:07 PM IST
ಗುರುಮಠಕಲ್ ಸಮೀಪದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಉನ್ನತ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ದಂಪತಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮಾತಾ ಮಾಣಿಕೇಶ್ವರಿ ಅವರ ಆಶ್ರಮಕ್ಕೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಭೇಟಿ

ಗುರುಮಠಕಲ್: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದಿಂದ ಸರ್ಕಾರ ರಚನೆಯಾದ ಮೇಲೆ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು, 5 ಗ್ಯಾರೆಂಟಿಗಳಿಂದ ರಾಜ್ಯದ ಜನಮನವನ್ನು ಗೆದ್ದಿದ್ದೇವೆ. ಸರ್ಕಾರ ಬಡವರ ಕಲ್ಯಾಣಕ್ಕಾಗಿ ತೊಡಗಿದ್ದು, ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ರಾಜ್ಯ ಉನ್ನತ ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ತಿಳಿಸಿದರು. ಸಮೀಪದ ಯಾನಾಗುಂದಿ ಗ್ರಾಮದ ಬೆಟ್ಟದಲ್ಲಿರುವ ಮಾತಾ ಮಾಣಿಕೇಶ್ವರಿ ಅವರ ಆಶ್ರಮಕ್ಕೆ ಭೇಟಿ ನೀಡಿ ದಂಪತಿ ಸಮೇತವಾಗಿ ಪೂಜೆ ಸಲ್ಲಿಸಿ ನಂತರ, ಗುರುಮಠಕಲ್ ಖಾಸಾಮಠಕ್ಕೂ ಭೇಟಿ ನೀಡಿ ಶಾಂತವೀರ ಗುರುಮುರುಘ ರಾಜೇಂದ್ರ ಮಹಾಸ್ವಾಮಿಗಳಿಂದ ಗೌರವ ಸನ್ಮಾನವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನನ್ನ ಮೊದಲ ಪ್ರಚಾರವನ್ನು ಹಾಗೂ ಪಾದಯಾತ್ರೆ ಕಾರ್ಯಕ್ರಮವನ್ನು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದಿಂದ ಆರಂಭಿಸಿದ್ದೆ. ಮಾತಾ ಮಾಣಿಕೇಶ್ವರಿ ಅಮ್ಮನವರ ಆರ್ಶಿವಾದದಿಂದ ಭರ್ಜರಿ ಗೆಲುವು ಸಾಧಿಸಿದ ನಂತರ ಪ್ರಥಮ ಬಾರಿಗೆ ಬಂದು ದಂಪತಿಗಳ ಸಮೇತ ಪೂಜೆ ಸಲ್ಲಿಸಿದ್ದೇವೆ ಎಂದರು. ಶಿವಮೊಗ್ಗದಲ್ಲಿ ನಡೆದ ಗಲಭೆ ಘಟನೆ ಕುರಿತು ಗೃಹಮಂತ್ರಿ ಡಾ.ಜಿ.ಪರಮೇಶ್ವರ ಇದು ಹೊಸತು ಅಲ್ಲ, ಹಳೆಯದು ನಡೆಯುತ್ತಿರುತ್ತದೆ ಎಂಬ ಪ್ರತಿಕ್ರಿಯೆ ನೀಡಿದ್ದು ತಪ್ಪು ಆಗುತ್ತದೆ. ಗಲಭೆಗಳನ್ನು ಯಾರೆ ಆಗಲಿ ಸಮರ್ಥಿಸಿಕೊಳ್ಳುವುದು ಸಮಂಜಸವಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದವರು ತಪ್ಪು ಹೇಳಿಕೆ ಮತ್ತು ಸಮರ್ಥನೆ ಮಾಡಿಕೊಳ್ಳುವುದನ್ನು ನಾನು ಖಂಡಿಸುತ್ತೇನೆ ಎಂದರು. ಶಾಸಕ ಶಾಮನೂರ ಶಿವಶಕಂರಪ್ಪ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಮತ್ತು ಲಿಂಗಾಯತ ಮುಖ್ಯಮಂತ್ರಿ ಕುರಿತು ವಿವಾದ ಎದ್ದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ತ್ವರಿತವಾಗುತ್ತಿದೆ. ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತಿದ್ದೇವೆ ಎಂದರು. ಯಾನಾಗುಂದಿ ಆಶ್ರಮದ ಶಿವಯ್ಯ ಸ್ವಾಮಿ, ಹಿರಿಯ ಮುಖಂಡರಾದ ಶಂಕರ ಭೂಪಾಲರೆಡ್ಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ನಂದಿಗಾಮ, ಕಾನಾಗಡ್ಡ ಗ್ರಾಪಂ ಅಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡರಾದ ಸಾಯಪ್ಪ ಮನ್ನೆ, ಶಂಕರ ರಾಜಾಪುರ, ನಾರಾಯಣ ರೆಡ್ಡಿ, ಸತ್ಯನಾರಾಯಣ ರೆಡ್ಡಿ, ಭೀಮರೆಡ್ಡಿ ಬುರುಗಪಲ್ಲಿ, ವೆಂಕಟ ರೆಡ್ಡಿ ಯಾನಗುಂದಿ, ವಿಷ್ಣುರೆಡ್ಡಿ, ಶ್ಯಾಮಪ್ಪ, ಆನಂದ ಬೊಯಿನ್, ಸಾಯಪ್ಪ ನತ್ತಿ ಸೇರಿದಂತೆ ಇತರರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ