ಹುಬ್ಬಳ್ಳಿ:
ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಕೈಗಾರಿಕೆಗಳು ಗುಣಮಟ್ಟದ ಜತೆಗೆ ವೇಗವನ್ನೂ ಹೆಚ್ಚಿಸಿಕೊಳ್ಳಬೇಕು. ಯಾವುದೇ ಕಂಪನಿಯ ಕಾರ್ಬನ್ ಕಾಪಿಯಾಗದೆ ಸ್ವಂತಿಕೆ ಬೆಳೆಸಿಕೊಳ್ಳಬೇಕು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್‌ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.ಇಲ್ಲಿಯ ಎಪಿಎಂಸಿ ಬಳಿಯ ಹು-ಧಾ ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಬುಧವಾರದಿಂದ ಮೂರು ದಿನ ನಡೆಯಲಿರುವ ವಾಲ್ವ ಎಕ್ಸ್- 2026 ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯಮ ರಂಗದಲ್ಲಿ ಗುಣಮಟ್ಟದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ಜತೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಇಟ್ಟುಕೊಳ್ಳಬೇಕು. ಉತ್ಪಾದನೆಗೆ ನಿಖರ ಹಾಗೂ ಸರಳೀಕೃತ ವಿಧಾನ ಬಳಸಬೇಕು. ಕೇವಲ ಬೇಡಿಕೆ ಬಂದಷ್ಟೇ ಉತ್ಪಾದನೆ ಮಾಡುವ ಬದಲು ದೊಡ್ಡ ಮಟ್ಟದಲ್ಲಿ ತಯಾರಿಸಿ ಸ್ಟಾಕ್ ಇಟ್ಟುಕೊಂಡರೆ ವೆಚ್ಚ ತಾನಾಗಿಯೇ ಕಡಿಮೆಯಾಗುತ್ತದೆ. ಇದಕ್ಕಾಗಿ ದಿನದ 24 ಗಂಟೆ, ವಾರದ ಎಲ್ಲ ದಿನಗಳು ಯಂತ್ರಗಳು ರನ್ ಆಗುತ್ತಿರಬೇಕು. ಆಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.ನಿರಾಣಿ ಗ್ರುಪ್ನ ಸಂಗಮೇಶ ನಿರಾಣಿ ಮಾತನಾಡಿ, ಹುಬ್ಬಳ್ಳಿಯು ವಾಲ್ವ ಹಾಗೂ ಪಂಪ್ ಉತ್ಪಾದನೆಗೆ ಹೆಸರು ಪಡೆದಿದೆ. ಜಗತ್ತಿನ ಹಲವು ದೇಶಗಳಿಗೆ ಶ್ರೇಷ್ಠ ಎಂಜಿನಿಯರ್ಗಳು ಇಲ್ಲಿಂದಲೇ ಹೋಗಿದ್ದಾರೆ. ಅವರೆಲ್ಲ ಇಲ್ಲಿಯೇ ಉದ್ಯಮ ಆರಂಭಿಸಿದ್ದರೆ ಹುಬ್ಬಳ್ಳಿ ಐಟಿ-ಸಿಟಿ ಆಗುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ, ದ್ವಿತೀಯ ಸ್ತರದ ನಗರಗಳತ್ತ ಉದ್ಯಮಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಹುಬ್ಬಳ್ಳಿ ದೊಡ್ಡ ಕೈಗಾರಿಕಾ ನಗರಿಯಾಗಲಿದೆ ಎಂದು ಹೇಳಿದರು.
ವಿಪ ಮಾಜಿ ಸದಸ್ಯ ಹಾಗೂ ಶಿವಮೊಗ್ಗದ ಶಾಂತಲಾ ಗ್ರುಪ್ನ ರುದ್ರೇಗೌಡ ಮಾತನಾಡಿ, ವಾಲ್ವ ಹಾಗೂ ಪಂಪ್ಗಳು ಅನೇಕ ಕೈಗಾರಿಕೆಗಳ ಅಗತ್ಯ ವಸ್ತುಗಳಾಗಿವೆ. ಜಾಗತಿಕ ಮಟ್ಟದಲ್ಲಿ ಹುಬ್ಬಳ್ಳಿ ಗುರುತಿಸಿಕೊಂಡಿದೆ. ಇಂತಹ ಪ್ರದರ್ಶನ ಮೇಳಗಳಿಂದ ವಾಲ್ವ ಇಂಡಸ್ಟ್ರಿಗೆ ಉತ್ತೇಜನ ಸಿಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮೈಕ್ರೋಫಿನಿಷ್ ವಾಲ್ವ ಕಂಪನಿಯ ಸಂಸ್ಥಾಪಕ ತಿಲಕ ವಿಕಂಶಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಲಕ ವಿಕಂಶಿ, 2ನೇ ವಾಲ್ವ ಎಕ್ಸ್ ಪ್ರದರ್ಶನ ಇದಾಗಿದ್ದು, ಬಹಳಷ್ಟು ಸುಧಾರಣೆಗಳು ಆಗಿವೆ. ಅಂತಾರಾಷ್ಟ್ರೀಯ ಕಂಪನಿಗಳು ಸಹ ಭಾಗಿಯಾಗಿರುವುದು ಖುಷಿಯ ಸಂಗತಿ ಎಂದರು.
ಸಂಟನಾ ಸಮಿತಿ ಚೇರ್‌ಮನ್ ರಮೇಶ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ವಾಲ್ವ ಉತ್ಪಾದಕರು ಇದ್ದು, ಹುಬ್ಬಳ್ಳಿಯಲ್ಲಿಯೇ ಬಹುಪಾಲು ಉದ್ಯಮಗಳಿವೆ. ದೇಶದ ವಾಲ್ವ ಉತ್ಪಾದನೆಯಲ್ಲಿ ಹುಬ್ಬಳ್ಳಿ ಶೇ. 15ರಷ್ಟು ಪಾಲು ಹೊಂದಿದೆ ಎಂದರು.ಸಂಟನೆಯ ಶಿವಾನಂದ ಆವಟಿ, ಎಂಎಸ್ಎಂಇ ಜಂಟಿ ನಿರ್ದೇಶಕ ಶಶಿಕುಮಾರ ಎಂ. ಮಾತನಾಡಿದರು. ಮಹದೇವ ಕರಮರಿ, ನಾಗರಾಜ ದಿವಟೆ, ಅನಿಶ ಅಹ್ಮದ, ಮಹಾಂತೇಶ ದಳವಾಯಿ, ಮಹೇಂದ್ರ ವಿಕಂಶಿ, ವಿ.ಜಿ. ಚಿಲ್ಲಾಳ, ಸಂಗಮೇಶ ದೇಸಾಯಿ ಸೇರಿದಂತೆ ಹಲವರಿದ್ದರು.