ಉತ್ತರ ಕರ್ನಾಟಕದ ೧೨ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು: ಎಚ್.ಕೆ. ಪಾಟೀಲ ವಿಶ್ವಾಸ

KannadaprabhaNewsNetwork | Published : Apr 17, 2024 1:16 AM

ಸಾರಾಂಶ

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ ಮತ್ತು ಬಿಜೆಪಿ ಹೇಳ ಹೆಸರಿಲ್ಲದಂತಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಚಾರಕ್ಕಾಗಿ ಸುತ್ತಾಡಿರುವಾಗ ಇದು ನನಗೆ ಅನುಭವಕ್ಕೆ ಬಂದಿದ್ದು, ಉತ್ತರ ಕರ್ನಾಟಕದಲ್ಲಿಯಂತೂ ಬಿಜೆಪಿಗೆ ಒಂದೇ ಒಂದು ಸ್ಥಾನವೂ ಲಭಿಸುವುದಿಲ್ಲ ಎಂದರು.

ಯಡಿಯೂರಪ್ಪ ಕಾಂಗ್ರೆಸ್ ಗೆಲ್ಲುವ ಎರಡು ಕ್ಷೇತ್ರಗಳ ಹೆಸರು ಹೇಳಿ ಎನ್ನುತ್ತಿದ್ದಾರೆ, ಆದರೆ, ನಾನು ಉತ್ತರ ಕರ್ನಾಟಕದ 12 ಕ್ಷೇತ್ರಗಳ ಹೆಸರು ಹೇಳುತ್ತೇನೆ. ರಾಜ್ಯಾದ್ಯಂತ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬಡತನ ನಿವಾರಣೆಯಾಗಿದೆ. ಇದೇ ಮಾದರಿಯಲ್ಲಿಯೂ ಕೇಂದ್ರದಲ್ಲಿ ಬಡತನ ನಿವಾರಣೆ ಮಾಡಲಾಗುವುದು ಎಂದರು.

ರಾಜ್ಯದ ಪ್ರವಾಸಿ ತಾಣ ಅಭಿವೃದ್ಧಿಪಡಿಸುತ್ತೇವೆ ಮತ್ತು ವಿಶ್ವದಾದ್ಯಂತ ಅವುಗಳನ್ನು ಪರಿಚಯಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಆದರೆ, ಅವರು 10 ವರ್ಷ ಪ್ರಧಾನಿಯಾಗಿದ್ದಾಗ ಯಾಕೆ ನೆನಪಾಗಲಿಲ್ಲ. ಅಷ್ಟಕ್ಕೂ ಹಂಪಿ, ಬದಾಮಿ, ಮೈಸೂರುಗಳನ್ನು ವಿಶ್ವಕ್ಕೆ ಈಗಾಗಲೇ ಪರಿಚಯವಾಗಿದೆ ಎನ್ನುವುದು ಗೊತ್ತಿರಲಿ ಎಂದರು.

ಪತ್ರ ಪರಿಶೀಲನೆ:ನಾನು 371 ಜೆ ಸ್ಥಾನಮಾನ ಅನುಷ್ಠಾನದ ಕುರಿತು ಬರೆದಿರುವ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತೇನೆ ಮತ್ತು ಹಾಗೊಂದು ವೇಳೆ ಅದು ಸುಳ್ಳಾಗಿದ್ದರೇ ತನಿಖೆ ನಡೆಸಲಾಗುವುದು ಎಂದರು.

371 ಜೆ ಅನುಷ್ಠಾನದಲ್ಲಿ ನಾನು ಸಾಕಷ್ಟು ಶ್ರಮಿಸಿದ್ದೇನೆ. ಕಲ್ಯಾಣಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ನೇಮಕಾತಿಗಳಲ್ಲಿ ಶೇ. 8 ಮೀಸಲಾತಿಯನ್ನು ಕೇಳಿರದಿದ್ದರೂ ನೀಡಿದ್ದೇನೆ. ಹೀಗಿದ್ದಾಗ ನಾನು ಅದರ ವಿರುದ್ಧವಾಗಿ ಪತ್ರ ಬರೆಯಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಯಾರೋ ಸುಳ್ಳು ಹರಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share this article