ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹೆದ್ದಾರಿ ತಡೆದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್ ನೇತೃತ್ವದಲ್ಲಿ ಗೋಬ್ಯಾಕ್ ರಾಜ್ಯಪಾಲರು ಘೋಷಣೆಯೊಂದಿಗೆ ಬ್ಯಾನರ್ ಹಿಡಿದು ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಪಗಳು ಬಂದವೇಳೆ ಪ್ರಾಥಮಿಕ ಹಂತದಲ್ಲಿ ಮೊದಲು ತನಿಖೆ ಮಾಡಿ ಪ್ರಕರಣಗಳ ಕುರಿತು ಮಾಹಿತಿ ಪಡೆದು ಸರಿಯೋ ತಪ್ಪು ಎಂದು ತಿಳಿದುಕೊಂಡು ಆನಂತರದಲ್ಲಿ ಪ್ರಾಸಿಕ್ಯೂಷನ್ ನೀಡಬೇಕು. ಅದನ್ನು ಬಿಟ್ಟು ದೂರು ಬಂದ ತಕ್ಷಣ ನೋಟಿಸ್‌ಗೆ ಉತ್ತರ ಸಿಗುವ ಮುಂಚೆ ಆರೋಪ ಮಾಡಿ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಖಂಡಿಸಿದರು.ಯಾವುದೋ ಒತ್ತಡದ ಮೇಲೆ ಈ ರೀತಿ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ನಾಯಕರ ಒತ್ತಡದಲ್ಲಿ ಪ್ರಾಸಿಕ್ಯೂಷನ್ ನೀಡಿರುವುದು ಸರಿಯಲ್ಲ. ಇದರಿಂದ ದೇಶದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪ್ರಕಾಶ್ ಮಾತನಾಡಿ, ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡಿರುವ ರಾಜಪಾಲರ ನಡೆ ಸರಿಯಲ್ಲ. ಬಹುಮತದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿದರು.ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಸುರೇಶ್, ಕಾರ್ಯಾಧ್ಯಕ್ಷ ಎಂ.ಲೋಕೇಶ್, ಪುರಸಭಾ ಸದಸ್ಯ ದಯಾನಂದ್, ಮುಖಂಡರಾದ ಎನ್. ಗಂಗಾಧರ್, ಎಲ್.ನಾಗರಾಜು, ಟಿ.ಕೃಷ್ಣ, ಬಸವರಾಜು, ಶಿವಯ್ಯ, ಕುರಬರ ಸಂಘದ ನಾಗರಾಜು, ಭಾಸ್ಕರ್, ಸಿದ್ದರಾಜು, ಸಲೀಂ ಸೇರಿದಂತೆ ಇತರ ಯುವ ಕಾಂಗ್ರೆಸ್‌ನ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.