ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ : ಜಿಲ್ಲೆಯಲ್ಲಿ ಮುಂದುವರಿದ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : Aug 19, 2024, 12:46 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಅಜ್ಜಂಪುರದಲ್ಲಿ ತರೀಕೆರೆ ಶಾಸಕ ಶ್ರೀನಿವಾಸ್‌ ನೇತೃತ್ವದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರವೂ ಕಾಂಗ್ರೆಸ್‌ ಪ್ರತಿಭಟನೆ ಮುಂದುವರಿದಿತ್ತು.

ಅಜ್ಜಂಪುರದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹನ । ಕಳಸದಲ್ಲೂ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರವೂ ಕಾಂಗ್ರೆಸ್‌ ಪ್ರತಿಭಟನೆ ಮುಂದುವರಿದಿತ್ತು.

ಅಜ್ಜಂಪುರ ಹಾಗೂ ಕಳಸ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ ರಾಜ್ಯಪಾಲರ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದರು.

ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌. ಶ್ರೀನಿವಾಸ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅಜ್ಜಂಪುರ ಪಟ್ಟಣದ ಗಾಂಧಿ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟು, ಬಿಜೆಪಿ ಮತ್ತು ಜೆಡಿಎಸ್ ಗೆ ಧಿಕ್ಕಾರ ಹಾಕುತ್ತಾ ಬಸ್ ನಿಲ್ದಾಣ, ನೆಹರು ವೃತ್ತ, ಸಿದ್ದರಾಮೇಶ್ವರ ವೃತ್ತ ಮೂಲಕ ಸಾಗಿ ಪುನಃ ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ಬಳಿಕ ಮಾನವ ಸರಪಳಿ ರಚಿಸಿ, ಟೈರ್ ಗೆ ಬೆಂಕಿ ಹಚ್ಚಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ, ರಾಜ್ಯಪಾಲ ಥಾವರಚಂದ್‌ ಗೆಹಲೋಟ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ಮಾಡಿರುವ ಒಳಸಂಚು ಇದು. ರಾಜ್ಯಪಾಲರ ಕ್ರಮ ವಿರುದ್ಧ ಕೋರ್ಟ್ ಮೆಟ್ಟಿಲೇರಿ, ನ್ಯಾಯ ಪಡೆಯಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೊಂದು ದ್ವೇಷದ ರಾಜಕಾರಣ, ರಾಜ್ಯ ಸರ್ಕಾರ ಐದು ಗ್ಯಾರಂಟಿ ನೀಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ಇದನ್ನು ಸಹಿಸಲಾರದೆ ಪ್ರತಿಪಕ್ಷಗಳು ಕುತಂತ್ರ ಮಾಡಿ ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಜಿ.ನಟರಾಜ್ ಮಾತನಾಡಿ, ಸಿದ್ಧರಾಮಯ್ಯ ಅವರ ಏಳಿಗೆ ಸಹಿಸದೇ, ಕೇಂದ್ರ ಸರ್ಕಾರ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಕುತಂತ್ರ ನಡೆಸಿದೆ. ಇಂತಹ ಷಡ್ಯಂತ್ರಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಮಣಿಯಲ್ಲ. ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲಿದ್ದೇವೆ ಎಂದರು.ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್ ಮಾತನಾಡಿ, ಸಿದ್ದರಾಮಯ್ಯ ರಾಜ್ಯದ ಜನರ ಮತಗಳಿಂದ ಆಯ್ಕೆಯಾಗಿ ಮುಖ್ಯಮಂತ್ರಿ ಯಾದವರು. ಕೇಂದ್ರ ಸರ್ಕಾರ ಅವರನ್ನು ಷಡ್ಯಂತ್ರದಿಂದ ಕೆಳಗಿಳಿಸುವ ಪ್ರಯತ್ನ ನಡೆಸಿದೆ. ರಾಜ್ಯದ ಜನರ ವಿಶ್ವಾಸಕ್ಕೆ ದ್ರೋಹ ಎಸಗುತ್ತಿದೆ. ಇದನ್ನು ರಾಜ್ಯದ ಜನ ಸಹಿಸಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಯಾನಂದ್, ಮುಖಂಡ ಜೋಗಿ ಪ್ರಕಾಶ್, ಗಡೀಹಳ್ಳಿ ಮಂಜುನಾಥ್, ರಾಘವೇಂದ್ರ, ನವೀನ್ ಮಂದಾಲಿ, ಕೃಷ್ಣಪ್ಪ, ಬಂಡ್ರೆ ಕಲ್ಲೇಶ್, ಅಯೂಬ್, ಮುಸ್ತಾಕ್‌ ಅಹಮದ್ ಹಾಗೂ ಕಾರ್ಯಕರ್ತರು ಇದ್ದರು.

--- ಬಾಕ್ಸ್-- ರಾಜ್ಯಪಾಲರ ಪಕ್ಷಪಾತ ಧೋರಣೆ

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕಳಸ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಅವರು, ಕಾಂಗ್ರೆಸ್ ವಿಚಾರದಲ್ಲಿ ಪಕ್ಷಪಾತ ಧೋರಣೆ ತೋರುತ್ತಿರುವ ರಾಜ್ಯಪಾಲರು ಮುಖ್ಯಮಂತ್ರಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಇರುವ ಎಚ್.ಡಿ.ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆಯಂತಹವರು ರಾಜ್ಯಪಾಲರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಆರೋಪಿಸಿದರು.

ಯಾವುದೇ ಕಪ್ಪು ಚುಕ್ಕಿ ಇರದ ಸಿದ್ಧರಾಮಯ್ಯ ಮೇಲೆ ಸುಳ್ಳು ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಬಿಜೆಪಿಗೆ ರಾಜ್ಯಪಾಲರು ಬೆಂಬಲ ನೀಡುತ್ತಿರುವುದರಿಂದ ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಚಳವಳಿ ಆರಂಭಿಸಲಾಗುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಮಾತನಾಡಿ, ಸರ್ಕಾರದ ಯಾವುದೇ ಏಜೆನ್ಸಿ ವಿಚಾರಣೆ ಇಲ್ಲದೆ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವುದು ದೊಡ್ಡ ಪ್ರಮಾದ ಎಂದು ಆರೋಪಿಸಿದರು.

ಬಹುಮತ ಇರುವ ಸಿದ್ಧರಾಮಯ್ಯ ಸರ್ಕಾರ ಬೀಳಿಸುವ ಯತ್ನವನ್ನು ರಾಜ್ಯಪಾಲರ ಕಚೇರಿ ಮೂಲಕ ಮಾಡಲಾಗುತ್ತಿದೆ. ಬಿಜೆಪಿ ಪಕ್ಷದ ಎಲ್ಲ ಭ್ರಷ್ಟರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದೆ. ಆದರೆ, ಬಡವರ ಪರ ಚಿಂತನೆ ಮಾಡುವ ಸಿದ್ಧರಾಮಯ್ಯ ರನ್ನು ಭ್ರಷ್ಟರಂತೆ ಬಿಂಬಿಸಲು ರಾಜ್ಯ ಪಾಲರ ಮೂಲಕ ಬಿಜೆಪಿ ಯತ್ನಿಸುತ್ತಿದೆ. ಈ ಯತ್ನವನ್ನು ರಾಜ್ಯದ ಜನತೆ ಗಮನಿಸಿ ಖಂಡಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶುಕೂರ್ ಮಾತನಾಡಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ತಮ್ಮ ಗೌರವ ಕಳೆದು ಕೊಳ್ಳುವ ಮುನ್ನ ರಾಜ್ಯಪಾಲರು ಸಿದ್ಧರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ನೀಡಿರುವ ಅನುಮತಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಶ್ವನಾಥ್ ಮರಸಣಿಗೆ, ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಸುಜಿತ್ ಬೆಳ್ಳ, ಶ್ರೀನಿವಾಸ, ಮಹಿಳಾ ಘಟಕದ ಪ್ರೇಮಾ, ಸಂಶುದ್ದೀನ್, ಸುಧಾಕರ್, ಗಣೇಶ್ ಭಟ್, ಸುರೇಶ್ ಭಟ್ ಭಾಗವಹಿಸಿದ್ದರು.

18 ಕೆಸಿಕೆಎಂ 4ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಅಜ್ಜಂಪುರದಲ್ಲಿ ತರೀಕೆರೆ ಶಾಸಕ ಶ್ರೀನಿವಾಸ್‌ ನೇತೃತ್ವದಲ್ಲಿ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

--- 18 ಕೆಸಿಕೆಎಂ 5ಸಿಎಂ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಳಸದಲ್ಲಿ ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!