ಪಿಎಲ್ ಡಿ ಬ್ಯಾಂಕ್ ಫಲಿತಾಂಶದಂದು ಕಾಂಗ್ರೆಸ್ ಕಾರ್ಯಕರ್ತರ ಜಗಳ

KannadaprabhaNewsNetwork | Published : Mar 2, 2025 1:20 AM

ಸಾರಾಂಶ

ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರಣದಿಂದಲೇ ಒಂದೇ ಪಕ್ಷದ ಇಬ್ಬರು ಸ್ಪರ್ಧೆ ಮಾಡಬೇಕಾಯ್ತು ಎಂದು ಮಾಜಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಯರಲಕ್ಕೇನಹಳ್ಳಿ ಮಂಜುನಾಥ್ ಗಂಭೀರ ಆರೋಪ ಮಾಡಿದರೆ, ಮತ್ತೋರ್ವ ಮುಖಂಡ ರಾಜ್ಯ ಯೂಥ್ ಕಾಂಗ್ರೆಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕುರಿತು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರ ಮೇಲಿನ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಮಾ.1 ರಂದು ಕೋರ್ಟ್ ಆದೇಶದಂತೆ ಪಿ.ಎಲ್.ಡಿ. ಬ್ಯಾಂಕ್ ನ ಮೂರು ನಿರ್ದೇಶಕ ಸ್ಥಾನಗಳ ಫಲಿತಾಂಶ ಹೊರಬಂದಿದ್ದು, ಬೀಚಗಾನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪ್ರಭಾವತಿ ಹಾಗೂ ಸರಸ್ವತಮ್ಮ ಇಬ್ಬರೂ ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿದ್ದು, ಇವರಲ್ಲಿ ಸರಸ್ವತಮ್ಮರವರು ಜಯಗಳಿಸಿದ್ದಾರೆ.

ಸರಸ್ವತಮ್ಮರವರಿಗೆ ಬೆಂಬಲಿಸಿದ ಮಾಜಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ವಿಜಯೋತ್ಸವದ ವೇಳೆ ಮಾತನಾಡಿ, ಬೀಚಗಾನಹಳ್ಳಿ ಕ್ಷೇತ್ರದಿಂದ ಸರಸ್ವತಮ್ಮರನ್ನು ಸ್ಪರ್ಧೆ ಮಾಡುವಂತೆ ಶಾಸಕರು ಸೂಚನೆ ನೀಡಿದ್ದರು. ಆದರೂ ಸಹ ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಒಳ ರಾಜಕೀಯ ಮಾಡಿ ಒಂದೇ ಕ್ಷೇತ್ರದಿಂದ ಇಬ್ಬರು ಕಾಂಗ್ರೆಸ್ ಬೆಂಬಲಿತರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮಾಡಿದ್ದಾರೆ. ತಾಲೂಕಿನ ಯುವ ಮುಖಂಡರು ಬೆಳೆಯಲು ಅವಕಾಶ ಮಾಡಿಕೊಡುತ್ತಿಲ್ಲ. ಈ ಕೂಡಲೇ ಕೆಪಿಸಿಸಿ ಅಧ್ಯಕ್ಷರಿಗೆ ಲಿಖಿತ ರೂಪದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ದೂರು ನೀಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಇನ್ನೂ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯೂಥ್ ಕಾಂಗ್ರೆಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ನಮ್ಮ ಪ್ರತಿಸ್ಪರ್ಧಿ ಬೆಂಬಲಿಗರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಸತ್ಯಕ್ಕೆ ದೂರವಾದ ಮಾತುಗಳು. ಅವರು ನನ್ನ ಪರವಾಗಿ ಮತಯಾಚನೆಗೆ ಬಂದಿಲ್ಲ. ಇಬ್ಬರೂ ಒಂದೇ ಪಕ್ಷದ ಬೆಂಬಲಿತರಾದ ಕಾರಣ ನಾನು ಯಾರ ಪರವಾಗಿ ಮತ ಕೇಳಲ್ಲ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಬರುವುದಿಲ್ಲ. ನಾವು ಸೂಚಕರನ್ನು ಸಹಿ ಮಾಡಿಸಿರುವುದು ಸಂಘದ ಷೇರುದಾರರದ್ದು. ಅವರು ಬಿಜೆಪಿ ಪಕ್ಷದವರಿರಬಹುದು. ಆದರೆ ಷೇರುದಾರರು. ಆ ರೀತಿಯಾಗಿ ಹೇಳುವುದಾದರೆ ಅವರಿಗೆ ಸೂಚಕರಾಗಿರುವುದು ಸಹ ಬಿಜೆಪಿ ಕಾರ್ಯಕರ್ತರೇ ಎಂದರು.

Share this article