ಸ್ಥಳೀಯ ಚುನಾವಣೆಗಳಿಗೆ ಸಿದ್ಧಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ

KannadaprabhaNewsNetwork |  
Published : Mar 31, 2026, 01:45 AM IST
30ಸಿಎಚ್ಎನ್‌51ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೊಳ್ಳೇಗಾಲ, ಯಳಂದೂರು ತಾಲೂಕು ಬೂತ್ ಲೆವೆಲ್ ಏಜೆಂಟ್-02 ರ ತರಬೇತಿ ಕಾರ್ಯಾಗಾರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ಈ ಬಗ್ಗೆ ಸಾರ್ವಜನಿಕರಿಗೆ ನೈಜತೆಯನ್ನು ಹೇಳುವಂತಾಗಬೇಕು. ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಈ ಬಾರಿ ಎಲ್ಲಾ ಕಡೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಈ ಬಗ್ಗೆ ಈಗಿಂದಲೇ ನಾವು ಇದಕ್ಕೆ ಸಿದ್ಧರಾಗಬೇಕು .

ಕನ್ನಡಪ್ರಭ ವಾರ್ತೆ ಯಳಂದೂರು

ಮುಂಬರುವ ಸ್ಥಳೀಯ ಚುನಾವಣೆಗಳಿಗೆ ನಾವು ಈಗಿನಿಂದಲೇ ಸಜ್ಜುಗೊಳ್ಳಬೇಕಿದೆ. ನಮ್ಮ ಪಕ್ಷದ ತಳ ಮಟ್ಟದ ಕಾರ್ಯಕರ್ತರು ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳು, ಇವುಗಳ ಅನುಕೂಲಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕೊಳ್ಳೇಗಾಲ, ಯಳಂದೂರು ತಾಲೂಕು ಬೂತ್ ಮಟ್ಟದ ಏಜೆಂಟ್-02 ರ ತರಬೇತಿ ಕಾರ್ಯಾಗಾರ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೊಳ್ಳೇಗಾಲ ಕ್ಷೇತ್ರದಲ್ಲಿ 243 ಬೂತ್‌ಗಳಿವೆ. ಇಲ್ಲಿಗೆ ಪ್ರತಿ ಬೂತ್‌ಗೂ ಬೂತ್ ಮಟ್ಟದ ಏಜೆಂಟ್-02 ನೇಮಕವಾಗಬೇಕು. ಇಲ್ಲಿಗೆ ನೇಮಕವಾಗುವ ವ್ಯಕ್ತಿ ಎಲ್ಲಾ ಸಮುದಾಯ, ಜಾತಿ, ಧರ್ಮಗಳ ವಿಶ್ವಾಸವನ್ನು ಗಳಿಸಿಕೊಂಡಿರಬೇಕು. ಪಕ್ಷದ ಕಾರ್ಯಕರ್ತನಾಗಿದ್ದು ನಿಷ್ಠೆಯಿಂದ ಕೆಲಸ ಮಾಡುವ ವ್ಯಕ್ತಿಯನ್ನು ನೇಮಕ ಮಾಡುವ ಉದ್ದೇಶದಿಂದ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ತಳಮಟ್ಟದಲ್ಲಿ ನಮ್ಮ ಪಕ್ಷ, ಸರ್ಕಾರದ ಸಾಧನೆಗಳು ನಮ್ಮ ಸರ್ಕಾರ ಬಂದ ಮೇಲೆ ಆಗಿರುವ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ:

ಸ್ಥಳೀಯ ಚುನಾವಣೆಗಳಲ್ಲಿ ಈ ಬಾರಿ ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗಳನ್ನು ಬಳಸಲು ರಾಜ್ಯ ಸರ್ಕಾರ ವಿಧೇಯಕ ಮಂಡಿಸಿದ್ದು ಇದನ್ನು ಅಂಗೀಕರಿಸಲಾಗಿದೆ. ಈ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಇವಿಎಂ ಮತಯಂತ್ರದಿಂದ ಮತಗಳ್ಳತನದಂತಹ ಅನುಮಾನಗಳು ಇವೆ. ಅನೇಕ ಮುಂದುವರಿದ ದೇಶಗಳಲ್ಲಿ ಇನ್ನೂ ಕೂಡ ಮತಪತ್ರಗಳ ಮೂಲಕವೇ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸ್ಥಳೀಯ ಚುನಾವಣೆಗಳಲ್ಲೂ ಮತಪತ್ರ ಬಳಕೆಗೆ ವಿಧೇಯಕ ಅಂಗೀಕರಿಸಲಾಗಿದೆ, ಈ ಬಗ್ಗೆಯೂ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಬಸವರಾಜು ಮಾತನಾಡಿ, ಬೂತ್‌ ಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ವಾಟ್ಸ್ ಆ್ಯಪ್‌ಗಳಲ್ಲಿ ಗ್ರೂಪ್ ಮಾಡಿಕೊಂಡು ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಳ್ಳಬೇಕು. ಪಕ್ಷ ನೀಡುವ ಪ್ರತಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಬೂತ್‌ನಲ್ಲಿರುವ ಮತದಾರರ ಪಟ್ಟಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರತಿ ಮನೆಮನೆಗೂ ತೆರಳಿ ಅವರಿಂದ ಮಾಹಿತಿ ಕಲೆ ಹಾಕಬೇಕು. ಪಕ್ಷದ ವಿಶ್ವಾಸ ಗಳಿಸಿಕೊಳ್ಳಲು, ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ನಾವು ಪಕ್ಷದ ಸಂಘಟನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಹಿಂದಿದ್ದೇವೆ. ಯಾವುದೇ ಕಾರಣಕ್ಕೂ ನಾವು ಮೈಮರೆಯಬಾರದು. ವಿರೋಧ ಪಕ್ಷಗಳು ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುತ್ತಾರೆ, ಈ ಬಗ್ಗೆ ಸಾರ್ವಜನಿಕರಿಗೆ ನೈಜತೆಯನ್ನು ಹೇಳುವಂತಾಗಬೇಕು. ಜಿಲ್ಲೆಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಈ ಬಾರಿ ಎಲ್ಲಾ ಕಡೆಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಈ ಬಗ್ಗೆ ಈಗಿಂದಲೇ ನಾವು ಇದಕ್ಕೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯರಾದ ಜೆ. ಯೋಗೇಶ್, ವಡಗೆರೆ ದಾಸ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿಪಂ ಮಾಜಿ ಉಪಾಧ್ಯಕ್ಷರಾದ ಕಿನಕಹಳ್ಳಿ ಸಿದ್ದರಾಜು, ಕೇತಮ್ಮ, ಕಮಲ್, ನಾಗರಾಜು, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಎಂಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಜಯರಾಮ್, ಚೇತನ್ ದೊರೆರಾಜ್, ಮಸಣಾಪುರ ವಿಜಯ್, ಚೇತನ್‌ಕುಮಾರ್ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ
ಸಬ್ಬಮ್ಮ ದೇವಿ ದರ್ಶನಕ್ಕೆ ಸದಾನಂದ ಗೌಡರ ಕುಟುಂಬ