ಕನ್ನಡಪ್ರಭ ವಾರ್ತೆ ಶಿಕಾರಿಪುರ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಪುತ್ರಿ ಗೀತಾ ಸ್ಪರ್ಧಿಸಿದ್ದು ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಿ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮನವಿ ಮಾಡಿದರು.ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿ
ಬಂಗಾರಪ್ಪನವರಿಗೆ ಶಿಕಾರಿಪುರದ ಬಗ್ಗೆ ಹೆಚ್ಚಿನ ಮಮಕಾರವಿದ್ದು ಬರಗಾಲದಿಂದ ಕಂಗೆಟ್ಟ ಸ್ಥಿತಿಯಲ್ಲಿ ತಾಲೂಕಿನ ಜನರಿದ್ದಾಗ ಭತ್ತ, ಬೀಜ, ಗೊಬ್ಬರ ಉಚಿತವಾಗಿ ವಿತರಿಸಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನಗಳಿಸಿದ್ದಾರೆ ಎಂದು ತಿಳಿಸಿದರು.ಮಧು ಸಚಿವರಾದ್ದರಿಂದ ಶಕ್ತಿ ದೊರೆತಿದೆ:
ವಿರೋಧಿಗಳು ಕಾಂಗ್ರೆಸ್ ಪಕ್ಷ ಹಾಗೂ ಸಚಿವ ಮಧು ಬಗ್ಗೆ ಕೇವಲವಾಗಿ ಟೀಕಿಸಬೇಡಿ. ಮಧು ಜಿಲ್ಲೆಯ ಏಕೈಕ ಹಿಂದುಳಿದ ವರ್ಗದ ನಾಯಕರಾಗಿದ್ದು ಅವರು ಸಚಿವರಾಗಿದ್ದರಿಂದ ಪಕ್ಷದ ಕಾರ್ಯಕರ್ತರಿಗೆ ಗೌರವ, ಶಕ್ತಿ ದೊರೆತಿದೆ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ ವಾಗ್ದಾನದಂತೆ ಎಲ್ಲ 5 ಗ್ಯಾರಂಟಿಗಳ ಜಾರಿಗೊಳಿಸಿದ್ದು ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ಅಂದಾಜು ರು.5 ರಿಂದ 6 ಸಾವಿರ ಮೌಲ್ಯದ ಸೌಲಭ್ಯ ನೀಡುತ್ತಿದೆ. ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಧೈರ್ಯವಾಗಿ ಮತ ಕೇಳುವ ಅರ್ಹತೆ ಕಾರ್ಯಕರ್ತರಿಗಿದೆ ಎಂದು ತಿಳಿಸಿದರು.ನಮ್ಮ ನಿಷ್ಠೆ ಪ್ರಶ್ನಾತೀತ:
ಪುರಸಭಾ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ 2016ರ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕ್ಷೇತ್ರದತ್ತ ಗೀತಾ ಬರಲಿಲ್ಲ ಎಂದು ಆರೋಪಿಸುವ ಸಂಸದರು. ಅಪ್ಪನ ಹೆಸರಿನಲ್ಲಿ ರಾಜಕಾರಣದಲ್ಲಿದ್ದು ಟೀಕಿಸುವ ನೈತಿಕತೆ ಇಲ್ಲ. ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷಯ,ಆರಾಧನಾ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಸಹಿತ ಹಲವು ಯೋಜನೆಯಿಂದಾಗಿ ಪುತ್ರಿ ಗೀತಾರಿಗೆ ಮತ ಕೇಳುವ ಶಕ್ತಿ ದೊರೆತಿದೆ ಎಂದು ತಿಳಿಸಿದರು. ಕಳೆದ ವಾರ ಶಿವಮೊಗ್ಗದ ಕಾಂಗ್ರೆಸ್ ಕಚೇರಿ ಮುಂದೆ ನ್ಯಾಯ ಕೇಳಲು ಹೋದಾಗ ಬಿಜೆಪಿ ಕಾರ್ಯಕರ್ತನೊಬ್ಬ ಸಚಿವರಿಗೆ ಧಿಕ್ಕಾರ ಕೂಗಿದ್ದು, ಬಂಗಾರಪ್ಪ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಬಗೆಗಿನ ನಮ್ಮ ನಿಷ್ಠೆ ಪ್ರಶ್ನಾತೀತ ಎಂದರು.ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿ ಗೆಲ್ಲಿಸುವ ಬಗ್ಗೆ ಶಪಥ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ರುದ್ರೇಗೌಡ ಚುರ್ಚುಗುಂಡಿ, ಪುರಸಭಾ ಸದಸ್ಯ, ನಗರಾಧ್ಯಕ್ಷ ರೋಷನ್, ಉಪಾಧ್ಯಕ್ಷೆ ಜಯಶ್ರೀ ಹೇಮರಾಜ್, ಕಮಲಮ್ಮ, ಗೋಣಿ ಪ್ರಕಾಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಶೀರ್ ಅಹ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ನಾಯ್ಕ, ಎಸ್ಸಿ ಘಟಕದ ಅಧ್ಯಕ್ಷ ಮಂಜಾನಾಯ್ಕ,ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಕಲ್ಮನೆ ಸುರೇಶ್, ಬೆಂಕಿ ಮಾಲತೇಶ್,ಜೀನಳ್ಳಿ ದೊಡ್ಡಪ್ಪ, ಸಂದೀಪ ಮತ್ತಿತರರಿದ್ದರು.