ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಪರಿಷತ್ತಿನ ಹಾಲಿ 11 ಸದಸ್ಯರ ಅವಧಿ ಮುಕ್ತಾಯಗೊಂಡಿದ್ದು, ಚುನಾವಣಾ ಆಯೋಗವು ಈ ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಿಗದಿಪಡಿಸಿದೆ. ಕಾಂಗ್ರೆಸ್ ವಿಧಾನಸಭೆಯಲ್ಲಿ ತಾನು ಹೊಂದಿರುವ ಸದಸ್ಯ ಬಲದ ಆಧಾರದ ಮೇಲೆ 11 ಸ್ಥಾನಗಳ ಪೈಕಿ ಏಳರಲ್ಲಿ ಸುಲಭ ಜಯ ಸಾಧಿಸಲಿದೆ.
ಹೀಗಾಗಿ ಏಳು ಸ್ಥಾನಗಳಿಗಾಗಿ ಡಜನ್ ಗಟ್ಟಲೇ ನಾಯಕರು ಪೈಪೋಟಿ ನಡೆಸಿದ್ದಾರೆ. ಈ ಎಲ್ಲರ ಪೈಕಿ ಸ್ಥಾನ ನಿಕ್ಕಿಯಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಮಾತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ವರುಣವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟ ಸಂದರ್ಭದಲ್ಲಿ ಯತೀಂದ್ರ ಅವರಿಗೆ ವಿಧಾನಪರಿಷತ್ ಸ್ಥಾನ ನೀಡುವ ವಾಗ್ದಾನ ಮಾಡಲಾಗಿತ್ತು.ಅದರಂತೆ, ಜೂನ್ ನಲ್ಲಿ ತೆರವಾಗಲಿರುವ ಸ್ಥಾನಗಳ ಪೈಕಿ ಒಂದು ಸ್ಥಾನ ಯತೀಂದ್ರ ಅವರಿಗೆ ದೊರೆಯುವುದು ಶತಃಸಿದ್ಧ. ಇದೊಂದನ್ನು ಹೊರತುಪಡಿಸಿದರೆ ಉಳಿದ ಆರು ಸ್ಥಾನಗಳಿಗೆ ಯಾರ ಹೆಸರು ಸೂಚಿಸಬೇಕು ಎಂಬ ಬಗ್ಗೆ ರಾಜ್ಯ ನಾಯಕತ್ವವು ಇನ್ನೂ ಚರ್ಚೆಯನ್ನೇ ಆರಂಭಿಸಿಲ್ಲ. ಆದರೆ, ಆಕಾಂಕ್ಷಿಗಳು ತೆರೆಮರೆಯಲ್ಲಿ ಭರ್ಜರಿ ಪೈಪೋಟಿ ಆರಂಭಿಸಿದ್ದಾರೆ.
ಹೀಗಾಗಿ ಸುರ್ಜೇವಾಲಾ ನಗರಕ್ಕೆ ಆಗಮಿಸುವ ಒಂದೆರಡು ದಿನ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆ ಸೇರಿ ಜಾತಿವಾರು ಅರ್ಹರ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಯಿದೆ.
ಈ ಪೈಕಿ ಹಿಂದುಳಿದ ವರ್ಗಗಳಿಗೆ ಲಭ್ಯವಾಗಲಿರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಿಕ್ಕಿಯಾಗಿದೆ. ಉಳಿದ ಒಂದು ಸ್ಥಾನಕ್ಕೆ ಸಚಿವ ಎಸ್.ಬೋಸರಾಜು ಸೇರಿದಂತೆ ಹಲವಾರು ಆಕಾಂಕ್ಷಿಗಳಿದ್ದಾರೆ.
ಇನ್ನು ಒಕ್ಕಲಿಗ ಕೋಟಾದಡಿಯಲ್ಲಿ ಕೆ.ಗೋವಿಂದರಾಜು ಅವರ ಹೆಸರು ಮುಂಚೂಣಿಯಲ್ಲಿದೆ. ಸತತವಾಗಿ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಕೆ.ಗೋವಿಂದರಾಜು ಅವರನ್ನು ಮೂರನೇ ಅವಧಿಗೂ ಮುಂದುವರೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರೂ ಆದ ಕೆಪಿಸಿಸಿ ಕಾರ್ಯದರ್ಶಿ ವಿನಯ್ ಕಾರ್ತಿಕ್, ಹಿರಿಯ ನಾಯಕ ಬಿ.ಎಲ್. ಶಂಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಪ್ರಯತ್ನ ನಡೆಸಿದ್ದಾರೆ.
ಈ ನಡುವೆ ಬ್ರಾಹ್ಮಣ ಸಮುದಾಯಕ್ಕೂ ಈ ಬಾರಿ ಅವಕಾಶ ನೀಡಬೇಕು ಎಂಬ ಒತ್ತಡ ನಿರ್ಮಾಣವಾಗಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಕೆಪಿಸಿಸಿ ಕಾರ್ಯದರ್ಶಿ (ಆಡಳಿತ) ವಿಜಯ ಮುಳಗುಂದ ಅವರು ತೀವ್ರ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರಿ ವಿಧಾನಪರಿಷತ್ ಸದಸ್ಯರಾಗಿದ್ದ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಹಿಂತಿರುಗುವಾಗ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಂದ ತೆರವಾಗಿರುವ ಸ್ಥಾನಕ್ಕೆ ಶೀಘ್ರ ಉಪ ಚುನಾವಣೆ ನಡೆಯುವ ಸಾಧ್ಯತೆಯಿದೆ.
ರೇಸಲ್ಲಿ ಯಾರ್‍ಯಾರು?ಯತೀಂದ್ರ ಸಿದ್ದರಾಮಯ್ಯ । ಬೋಸರಾಜು । ಸಿ.ಎಸ್. ದ್ವಾರಕಾನಾಥ್ । ವಿ.ಎಸ್. ಸುದರ್ಶನ್ । ಎಲ್. ನಾರಾಯಣ । ಕೆ. ಗೋವಿಂದರಾಜು । ವಿನಯ್ ಕಾರ್ತಿಕ್ । ಬಿ.ಎಲ್. ಶಂಕರ್ । ಮಂಜುನಾಥ ಗೌಡ । ಐವಾನ್ ಡಿಸೋಜಾ । ಆಘಾ ಸುಲ್ತಾನ್ । ಪುಷ್ಪಾ ಅಮರನಾಥ್ । ಆರತಿ ಕೃಷ್ಣ । ರಾಣಿ ಸತೀಶ್ । ವಿಜಯ ಮುಳಗುಂದಮೇ 25ರ ಬಳಿಕ ಪ್ರಕ್ರಿಯೆ ಚುರುಕು?ಮೂಲಗಳ ಪ್ರಕಾರ, ಮೇಲ್ಮನೆ ಸ್ಥಾನಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುವುದು ಮೇ 25ರ ನಂತರ. ಏಕೆಂದರೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೇ 25ರವರೆಗೂ ಉತ್ತರ ಭಾರತದಲ್ಲಿ ನಡೆದಿರುವ ಚುನಾವಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದು, ಮೇ 26ರಂದು ಅಥವಾ ಅನಂತರ ಬೆಂಗಳೂರಿಗೆ ಆಗಮಿಸಲಿದ್ದಾರೆ.ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂ.13ರಂದು ಚುನಾವಣೆ ನಡೆಯಲಿದ್ದು, ವಿಧಾನಸಭೆಯ ಬಲಾಬಲದ ಮೇಲೆ ಕಾಂಗ್ರೆಸ್ಸಿಗೆ 7 ಸ್ಥಾನ ಪಕ್ಕಾ ಆಗಿದೆ. ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಪಕ್ಷದಲ್ಲಿ ಪ್ರಕ್ರಿಯೆ ಆರಂಭವಾಗಿಲ್ಲದಿದ್ದರೂ ಡಜನ್‌ಗಟ್ಟಲೆ ಆಕಾಂಕ್ಷಿಗಳಿಂದ ಅವಕಾಶಕ್ಕಾಗಿ ಪೈಪೋಟಿ ನಡೆಯುತ್ತಿದೆ. ತಂದೆ ಸಿದ್ದುಗೆ ಕ್ಷೇತ್ರ ತ್ಯಾಗ ಮಾಡಿದ್ದ ಯತೀಂದ್ರಗೆ 1 ಸ್ಥಾನ ಖಾತ್ರಿ ಎನ್ನಲಾಗಿದೆ.