ಕಾಂಗ್ರೆಸ್ಸಿನವರಿಗೆ ತ್ಯಾಗ, ದೇಶಭಕ್ತಿ ಗೊತ್ತಿಲ್ಲ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : May 12, 2026, 02:30 AM IST
 ಬಸವರಾಜ ಬೊಮ್ಮಾಯಿ | Kannada Prabha

ಸಾರಾಂಶ

ಯುದ್ಧ ಮುಗಿದಿಲ್ಲ. ಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಗ್ಯಾಸ್ ಸಂಕಷ್ಟ ಬರಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳು ಹತ್ತು ಪಟ್ಟು ಹೆಚ್ಚಿಗೆ ಆಗಿವೆ.

ಗದಗ: ಇಸ್ರೆಲ್, ಅಮೆರಿಕ, ಇರಾನ್ ಯುದ್ಧ ಮುಗಿಯದ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನವರಿಗೆ ತ್ಯಾಗ, ದೇಶಭಕ್ತಿ ಅನ್ನುವುದೇ ಗೊತ್ತಿಲ್ಲ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಇಸ್ರೇಲ್, ಅಮೆರಿಕ ಯುದ್ಧ ನಡೆಯುತ್ತಿದೆ. ಗಲ್ಫ್ ರಾಷ್ಟ್ರದ ಯುದ್ಧ ಮುಗಿಯುವಂತೆ ಕಾಣುತ್ತಿಲ್ಲ. ಉಕ್ರೇನ್- ರಷ್ಯಾ ಯುದ್ಧವಾದಾಗ ಬಹಳಷ್ಟು ಸಮಸ್ಯೆ ಆಗಿತ್ತು. ರಸಗೊಬ್ಬರ ಕಚ್ಚಾವಸ್ತುಗಳ ಸಮಸ್ಯೆ ಆಗಿತ್ತು. ಈಗ ಪೆಟ್ರೋಲ್, ಡೀಸೆಲ್ ಸಮಸ್ಯೆ ಆಗುತ್ತಿದೆ. ಇರಾನ್ ದೇಶದ ಮೇಲೆ ಅವಲಂಬಿತವಾಗಿದ್ದೇವೆ. ಇಷ್ಟು ದಿನ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಉಪಯೋಗಿಸಿ ಕಳೆದ ಎರಡು ತಿಂಗಳು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಮಸ್ಯೆ ಆಗದಂತೆ ನೋಡಿದ್ದಾರೆ ಎಂದರು.

ಯುದ್ಧ ಮುಗಿದಿಲ್ಲ. ಬರುವ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಗ್ಯಾಸ್ ಸಂಕಷ್ಟ ಬರಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳು ಹತ್ತು ಪಟ್ಟು ಹೆಚ್ಚಿಗೆ ಆಗಿವೆ. ಅಮೆರಿಕ, ಶ್ರೀಲಂಕಾ, ಮಲೇಶಿಯಾ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರದಲ್ಲಿ ದರ ಏರಿಕೆ ಆಗಿದೆ. ಭಾರತ ದರ ಹೆಚ್ಚಿಗೆ ಆಗದೆ ಇರುವ ದೇಶವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ನೀಡಿದ್ದಾರೆ. ಜನರು ಮಿತವ್ಯಯದಲ್ಲಿ ಬಳಕೆ ಮಾಡಬೇಕು. ದೇಶಕ್ಕಾಗಿ ಇಷ್ಟಾದರೂ ಮಾಡಬೇಕಿದೆ ಎಂದರು.

ಈ ಹಿಂದೆ ಭಾರತ- ಪಾಕಿಸ್ತಾನ ಯುದ್ಧವಾದಾಗ ಆಹಾರ ಕೊರತೆ ಆಗಿತ್ತು. ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಒಂದು ದಿನ ಉಪವಾಸ ಮಾಡಿ ಎಂದಿದ್ದರು. ಒಬ್ಬ ನಾಯಕನ ನೈತಿಕ ಬಲವಿದ್ದಾಗ ಮಾತ್ರ ಹೇಳಲು ಆಗುತ್ತದೆ. ಇದು ಕಾಂಗ್ರೆಸ್ಸಿನವರಿಗೆ ಅರ್ಥ ಆಗುವುದಿಲ್ಲ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಬೇರು ಗಟ್ಟಿಯಾಗಿವೆ. ಬಲವರ್ಧನೆ ಇದೆ. ಈ ಹಿಂದೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಸರ್ಕಾರ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಜನರು ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ. ಸುಧಾಕರ್‌ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಹಾನಿಯಾಗಿದೆ-ಸಚಿವ ಸತೀಶ ಜಾರಕಿಹೊಳಿ
ಗುರು ಬಲದಿಂದ ಬಾಳು ಸುಭದ್ರ: ರಂಭಾಪುರಿಶ್ರೀ