ಗದಗ: ಕಾಂಗ್ರೆಸ್ಸಿಗರು ಎಲ್ಲವನ್ನೂ ವಿರೋಧಿಸುವ ಚಾಳಿ ಮುಂದುವರಿಸಿದ್ದು, ದೇಶದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ವಿನಂತಿಯನ್ನು ಟೀಕಿಸುತ್ತಾರೆ. ಕಾಂಗ್ರೆಸಿಗರು ದಪ್ಪ ಚರ್ಮದ ನಾಯಕರಾಗಿದ್ದು, ಅವರಿಗೆ ದೇಶಕ್ಕಿಂತ ಗಾಂಧಿ ಕುಟುಂಬವೇ ಮುಖ್ಯವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟೀಕಿಸಿದರು.
ಪ್ರಧಾನಿಯವರು ಕೇವಲ ಉಪದೇಶ ಮಾಡದೆ, ಅದನ್ನು ತಾವೂ ಪಾಲಿಸುತ್ತಿದ್ದಾರೆ. ಜಗತ್ತಿನಲ್ಲೇ ಅತ್ಯಂತ ಹೆಚ್ಚು ಭದ್ರತಾ ರಿಸ್ಕ್ ಹೊಂದಿರುವ ಪ್ರಧಾನಿ ಮೋದಿ ಅವರು, ತಮಗಿರುವ ಜೆಡ್ ಪ್ಲಸ್ ಸೆಕ್ಯುರಿಟಿಯ ಅಬ್ಬರವನ್ನು ಬದಿಗಿಟ್ಟು ಕೇವಲ ಒಂದೇ ವಾಹನವನ್ನು ಬಳಸುವ ಮೂಲಕ ಸರಳತೆ ಮೆರೆಯುತ್ತಿದ್ದಾರೆ.
ಇತ್ತ ಪ್ರಧಾನಿ ಮೋದಿ ಅವರ ಮಿತವ್ಯಯದ ಹೇಳಿಕೆಯನ್ನು ವ್ಯಂಗ್ಯವಾಡುತ್ತಿರುವ ಕಾಂಗ್ರೆಸ್ ನಾಯಕರು ಏನು ಮಾಡುತ್ತಿದ್ದಾರೆ? ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಅವರ ಯಾವ ಮಾತನ್ನು ಪಾಲನೆ ಮಾಡುತ್ತಿದ್ದಾರೆ? ನಿಮ್ಮ ಹಿಂದೆ ಮುಂದೆ ಎಷ್ಟು ವಾಹನಗಳು ಓಡಾಡುತ್ತಿವೆ ಎನ್ನುವುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರೂ ಇಂತಹದೇ ಮಿತವ್ಯಯದ ಕರೆಗಳನ್ನು ನೀಡಿದ್ದರು ಎನ್ನುವುದನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ ಎಂದರು.ಕೇವಲ ನಾಟಕ: ಇತ್ತೀಚೆಗೆ ಇಂಧನ ದರ ಏರಿಕೆ ಖಂಡಿಸಿ ಬಿಜೆಪಿ ನಾಯಕರು ಸೈಕಲ್ ಸವಾರಿ ಮಾಡಿದ್ದನ್ನು ಕಾಂಗ್ರೆಸಿಗರು ವ್ಯಂಗ್ಯವಾಡಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಜನಸಾಮಾನ್ಯರ ಪರವಾಗಿ ಹೋರಾಡುವವರನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಕೇವಲ ನಾಟಕ ಆಡಿ ರಾಜ್ಯ ಆಳಬೇಕು ಎನ್ನುವ ಮನೋಭಾವವಿದೆ. ಕೋವಿಡ್ ಸಮಯದಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ಸುಳ್ಳು ಆರೋಪ ಹೊರಿಸಿದ ಇವರು, ಎಲ್ಲರನ್ನೂ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.