ನೈಜ ಹೋರಾಟಗಾರರ ಮರೆಮಾಚಿದ ಕಾಂಗ್ರೆಸ್ಸಿಗರು

KannadaprabhaNewsNetwork |  
Published : Nov 03, 2025, 02:30 AM IST
2ಕೆಪಿಎಲ್1: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಜಂಟಿ ಕ್ರಿಯಾ ವೇದಿಕೆ) ಪರಿಸರ ಹಿತರಕ್ಷಣಾ ವೇದಿಕೆ, ಕೊಪ್ಪಳ, ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ  ಧರಣಿ ಸತ್ಯಾಗ್ರಹದಲ್ಲಿ ಜೆಡಿಎಸ್ ನವರು ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.  | Kannada Prabha

ಸಾರಾಂಶ

ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮನಸ್ಸು ಮಾಡಿದರೆ ಉದ್ದೇಶಿತ ಬಲ್ದೋಟ್‌ ಕಾರ್ಖಾನೆ ಸ್ಥಾಪನೆರದ್ದು ಮಾಡಲು ಸಾಧ್ಯ

ಕೊಪ್ಪಳ: ಇತ್ತೀಚೆಗೆ ಸಿಎಂ ಕೊಪ್ಪಳಕ್ಕೆ ಬಂದಾಗ ಕಾರ್ಖಾನೆ ಬೇಡ ಎಂದು ಹೋರಾಟ ಮಾಡುವ ನೈಜ ಹೋರಾಟಗಾರರನ್ನು ಬೇರೆ ಕಡೆ ಸ್ಥಳಾಂತರಿಸಿ ಕಾರ್ಖಾನೆ ಬೇಕು ಎಂಬ ಬಾಡಿಗೆ ಹೋರಾಟಗಾರರನ್ನು ಸಿಎಂ ಮುಂದೆ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು ನಿಲ್ಲಿಸಿದ್ದರು ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ನಗರದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಜಂಟಿ ಕ್ರಿಯಾ ವೇದಿಕೆ) ಪರಿಸರ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದರು.

ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮನಸ್ಸು ಮಾಡಿದರೆ ಉದ್ದೇಶಿತ ಬಲ್ದೋಟ್‌ ಕಾರ್ಖಾನೆ ಸ್ಥಾಪನೆರದ್ದು ಮಾಡಲು ಸಾಧ್ಯವಿದೆ. ಪರಿಸರ ಸಂಬಂಧಿತ ವಿಷಯಗಳ ಅನುಮೋದನೆ ಹೊರತುಪಡಿಸಿದರೆ ಕಾರ್ಖಾನೆ ಸ್ಥಾಪನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಯಾವುದೇ ಕಾರ್ಖಾನೆ ಆರಂಭಿಸುವ, ರದ್ದುಪಡಿಸುವ ಅಧಿಕಾರ ಸಂಪೂರ್ಣ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಹೀಗಾಗಿ ಇಲ್ಲಿನ ಶಾಸಕರು, ಜಿಲ್ಲೆಯ ಕಾಂಗ್ರೆಸ್ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಕಾರ್ಖಾನೆ ಸ್ಥಾಪನೆ ರದ್ದುಗೊಳಿಸಲು ಸಾಧ್ಯವಿದೆ. ಕಾಂಗ್ರೆಸ್ ಜನಪ್ರತಿನಿಧಿಗಳು ಈ ಕೆಲಸ ಮಾಡಿದರೆ ಅವರ ಮನೆಯ ತನಕ ನಾನು ದೀರ್ಘದಂಡ ನಮಸ್ಕಾರ ಹಾಕಿ ಅವರನ್ನು ಸನ್ಮಾನಿಸುತ್ತೇನೆ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿ, ನಮಗೆ ಕಾರ್ಖಾನೆಗಳು ನೀಡುವ ಉದ್ಯೋಗ ಬೇಕಿಲ್ಲ. ನಮಗೆ ಬೇಕಿರುವುದು ಶುದ್ಧ ಗಾಳಿ, ನೀರು ಹಾಗೂ ಮಣ್ಣು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ತಾರ್ಕಿಕ ಹಂತಕ್ಕೆ ಕೊಂಡಯ್ಯಬೇಕು ಎಂದರು.

ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮಾತನಾಡಿ, ಕೊಪ್ಪಳದಿಂದ ಬಲ್ದೋಟ್‌ ಕಾರ್ಖಾನೆ ನಿರ್ಗಮಿಸುವವರೆಗೂ ನಾವು ವಿರಮಿಸಬಾರದು. ಕೊಪ್ಪಳದ ಪರಿಸರ ಹಾಳು ಮಾಡಿದ ಕೀರ್ತಿ ಕಳೆದ 30 ವರ್ಷಗಳಿಂದ ಅಧಿಕಾರ ಅನುಭವಿಸುತ್ತಿರುವ ಎರಡು ಕುಟುಂಬಗಳಿಗೆ ಸಲ್ಲುತ್ತದೆ ಎಂದು ಹೇಳಿದರು.

ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ್, ಜೆಡಿಎಸ್ ಜಿಲ್ಲಾ ಚುನಾವಣೆ ಅಧಿಕಾರಿ ಶಿವಕುಮಾರ್ ಏಣಿಗಿ, ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ಮಹಿಳಾ ನಗರ ಘಟಕದ ಅಧ್ಯಕ್ಷ ನಿರ್ಮಲಾ ಮೇದಾರ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಹಾಗೂ ಅನೇಕ ಹೋರಾಟಗಾರರಿದ್ದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ