ಹಗರಿಬೊಮ್ಮನಹಳ್ಳಿ: ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಮೋಸವಾಗುತ್ತಿದೆ. ಖರೀದಿದಾರರು ಬೆಳೆಗೆ ತಕ್ಕ ಬೆಲೆಯನ್ನು ನೀಡಿ ಖರೀದಿಸಬೇಕು. ರೈತರಿಗೆ ಅನ್ಯಾಯವಾಗುತ್ತಿರುವುದನ್ನು ಎಪಿಎಂಸಿಯವರು ಕೂಡಲೇ ತಡೆಯಬೇಕು ಎಂದು ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಹೇಳಿದರು.
ರೈತರು ಬೆಳೆದ ಬೆಳೆಗಳಿಗೆ ವರ್ತಕರು ಸೂಕ್ತ ಬೆಲೆ ನೀಡಬೇಕು. ತೂಕದಲ್ಲಿ ಯಾವುದೇ ಮೋಸ ಮಾಡದಂತೆ ವರ್ತಕರಿಗೆ ಮಾರ್ಗದರ್ಶನ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ರೈತರ ಬೆಳೆಗಳ ಖರೀದಿಯಲ್ಲಿ ಮೋಸವಾದರೆ ಕೃಷಿ ಉತ್ಪನ್ನ ಮಾರುಕಟ್ಟೆಯವರು ವರ್ತಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಬೇಕಾಬಿಟ್ಟಿ ಖರೀದಿ ಮಾಡುತ್ತಿರುವ ವರ್ತಕರಿಗೆ ಎಪಿಎಂಸಿಯವರು ಪರವಾನಗಿ ನೀಡಬಾರದು. ಎಪಿಎಂಸಿ ಈ ಮುಂಚೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈಗ ಹಂದಿಗಳ ವಾಸಸ್ಥಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ನ.7ರಂದು ನಡೆಯುವ ಸಭೆಗೆ ಎಲ್ಲ ವರ್ತಕರು ಬರಬೇಕು. ಬರದಿದ್ದ ವರ್ತಕರ ಲೈಸೆನ್ಸ್ ರದ್ದು ಮಾಡಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು. ತಂಬ್ರಹಳ್ಳಿ ಸೇರಿ ಹೆಚ್ಚು ಬೇಡಿಕೆ ಇರುವ ಕಡೆ ಎಪಿಎಂಸಿಯವರು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಆರ್.ಕವಿತಾ ಮಾತನಾಡಿ, ರೈತರಿಗೆ ಸಹಾಯವಾಗಲು ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ರೈತರ ಮಾಹಿತಿಗಾಗಿ ಸಹಾಯವಾಣಿ ಸೇವೆ ನೀಡಬೇಕು. ಮುಂದಿನ ಶುಕ್ರವಾರ ನಡೆಯುವ ಸಭೆಯಲ್ಲಿ ಅಡಳಿತಾಧಿಕಾರಿ ಕಡ್ಡಾಯವಾಗಿ ಹಾಜರಿರಬೇಕು. ಎಪಿಎಂಸಿಯ ವರ್ತಕರು ಮತ್ತು ಹೊರಗಡೆ ಖರೀದಿದಾರರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು. ಇಲ್ಲವಾದರೆ ಅವರ ಖರೀದಿಗೆ ನೀಡಿದ ಪರವಾನಗಿ ರದ್ದುಗೊಳಿಸಲಾಗುವುದು ಎಂದರು.ಎಪಿಎಂಸಿ ಕಾರ್ಯದರ್ಶಿ ಶೈಲಜಾ ಮಾತನಾಡಿ, ರೈತರು ಬೆಳೆದ ಬೆಳೆಯಲ್ಲಿ ಕಸಕಡ್ಡಿ ಹೆಚ್ಚಿದ್ದರೆ ವರ್ತಕರು ಹೆಚ್ಚು ಬಾಜ್ ತೆಗೆದುಕೊಳ್ಳುತ್ತಾರೆ ಎಂದಾಗ, ರೈತ ಮುಖಂಡ ಮಾಬುಸಾಬ್ ಪ್ರತಿಕ್ರಿಯಿಸಿ, ರೈತರು ಬೆಳೆದ ಬೆಳೆಗಳನ್ನು ಸ್ವಚ್ಛವಾಗಿ ಕೊಟ್ಟರೂ ಒಂದೇ ಬೆಲೆಯಲ್ಲಿ ಖರೀದಿ ಮಾಡುವುದರ ಜೊತೆಗೆ ಎಲ್ಲದಕ್ಕೂ ಒಂದೇ ಬಾಜ್ ಮುರಿಯುತ್ತಿದ್ದಾರೆ. ವರ್ತಕರು ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ರೈತರು ಬೆಳೆದ ಬೆಳೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಾರೆ. ಎಪಿಎಂಸಿ ಅಧಿಕಾರಿಗಳು ವರ್ತಕರು ಖರೀದಿ ಮಾಡುವ ಸ್ಥಳಗಳಿಗೆ ಎಂದೂ ಭೇಟಿ ನೀಡುವುದಿಲ್ಲ ಎಂದು ಹರಿಹಾಯ್ದರು.
ಸರಿಯಾಗಿ ಮಾಹಿತಿ ನೀಡದ ವರ್ತಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.