ಶಿರಾಳಕೊಪ್ಪ: ಆರ್‌ಎಸ್‌ಎಸ್ ಶತಮಾನೋತ್ಸವ ಪ್ರಯುಕ್ತ ಶಿರಾಳಕೊಪ್ಪ ಪಟ್ಟಣದಲ್ಲಿ ಬೃಹತ್ ಪಥಸಂಚಲನ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು.
ಶನಿವಾರ ನಡೆದ ಪಥಸಂಚಲನದಲ್ಲಿ ತಾಲೂಕಿನ ಸಹಸ್ರಾರು ಸ್ವಯಂಸೇವಕರು ಗಣವೇಷದಲ್ಲಿ ಸಂತಸದಿಂದ ಆಗಮಿಸಿ ಸಂಘದ ವಾದ್ಯಗಳಿಗೆ ಹೆಜ್ಜೆ ಹಾಕುತ್ತಾ ಹೋಗುವಾಗ ಪಟ್ಟಣದ ಮಹಿಳೆಯರು ಕೇಸರಿ ಸೀರೆ ಉಟ್ಟು ರಂಗವಲ್ಲಿ ಹಾಕಿ ಹೂ ಮಳೆಗರೆದರು.ಪಟ್ಟಣದ ಎರಡು ಭಾಗದಿಂದ ಪಥಸಂಚಲನ ಹೊರಟಿತು. ಒಂದು ತಂಡ ಪಟ್ಟಣದ ವಾಲ್ಮೀಕಿ ವನದಿಂದ ಹೊರಟು ಕೆಳಗಿನಕೇರಿ ಚೌಕಿ ಮಠ ರಸ್ತೆ, ಗಾಂಧೀನಗರ ಮುಖಾಂತರ ಬಸ್ ನಿಲ್ದಾಣಕ್ಕೆ ಬಂದಿತು. ಮತ್ತೊಂದು ತಂಡ ಆನವಟ್ಟಿ ರಸ್ತೆಯಿಂದ ಹೊರಟು ಪಟ್ಟಣದ ಕಲಾಲ್ ಕೇರಿ, ಹೊಂಡದ ಕೇರಿ, ಕುಂಬಾರಕೇರಿ ಮುಖಾಂತರ ಬಸ್ ನಿಲ್ದಾಣಕ್ಕೆ ಬಂದು ಎರಡು ತಂಡ ಒಟ್ಟಾಗಿ ಸೊರಬ ರಸ್ತೆಯಲ್ಲಿ ಎಸ್‌ಜೆಪಿ ಐಟಿಐ ಮೈದಾನಕ್ಕೆ ಬಂದು ತಲುಪಿದವು.
ರಸ್ತೆಯ ಬದಿ ಜನತೆ ನಿಂತು ಹಿಂದು ಧರ್ಮದ ಘೋಷಣೆ ಕೂಗುತ್ತಾ ಪುಷ್ಪ ಹಾಕುತ್ತಿದ್ದರು. ಪುಟ್ಟ ಮಕ್ಕಳು ವೀರಯೋಧರ ಪೋಷಾಕಿನಲ್ಲಿ ಗಮನ ಸೆಳೆದರು. ಪಥಸಂಚಲನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪದ್ಮನಾಭ್ ಭಟ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್, ಅಗಡಿ ಅಶೋಕ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆನ್ನವೀರಪ ಸೇರಿದಂತೆ ಹಲವಾರು ಪ್ರಮುಖರು ಗಮನಸೆಳೆದರು.ನಂತರ ನಡೆದ ಸಾವರ್ಜನಿಕ ಸಭೆಯಲ್ಲಿ ಕರ್ನಾಟಕ ಉತ್ತರ ಪ್ರಾಂಥದ ಪ್ರಚಾರಕ ಡಾ.ರವೀಂದ್ರ ಮಾತನಾಡಿ, ರಾಜ್ಯದ ಎಲ್ಲಾ ತಾಲೂಕಿನಲ್ಲಿ ಶತಮಾನೋತ್ಸವ ಹಿನ್ನೆಲೆಯಲ್ಲಿ ಪಥ ಸಂಚಲನ ನಡಯುತ್ತಿವೆ. ಉತ್ತರ ಕರ್ನಾಟಕದಲ್ಲಿ ೨೫೦ಕ್ಕೂ ಹೆಚ್ಚು ಪಥಸಂಚಲನಗಳು ನಡೆದಿವೆ. ಆದರೆ ಇಂದು ಪ್ರತಿದಿನ ಸಂಘದ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೆ ಯಾಕೆ ಸಂಘ ಉತ್ತರ ಕೊಡುತ್ತಿಲ್ಲ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ನಾವು ಉತ್ತರವನ್ನು ನಮ್ಮದೇ ರೀತಿಯಲ್ಲಿ ಕೊಡುತ್ತೇವೆ ಎಂದು ತಿಳಿಸಿದರು.
ಇತ್ತೀಚೆಗೆ ಸಚಿವ ಪ್ರಿಯಾಂಕ ಖರ್ಗೆ ಅವರು ನಾವು ಕೈಯಲ್ಲಿ ಹಿಡಿದಿರುವ ದಂಡದ ಬಗ್ಗೆ ಮಾತನಾಡುತ್ತಾರೆ. ಭಾರತದ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ದಂಡವನ್ನು ಶಸ್ತ್ರವಾಗಿ ಪರಿಗಣಿಸಿಲ್ಲ, ಆದರೆ ಸ್ವಯಂ ಸೇವಕರು ಶಿಸ್ತು ಮತ್ತು ಆತ್ಮರಕ್ಷಣೆಗಾಗಿ ಬಳಸಲಾಗುತ್ತಿದೆ ಎಂದರು.ಆರ್‌ಎಸ್‌ಎಸ್ ರಾಜಕೀಯ ಸಂಘಟನೆ ಅಲ್ಲ, ಇದು ಸಾಂಸ್ಕ್ರತಿಕ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಬೆಳೆಸುವ ಸಂಸ್ಥೆ. ಈ ಹಿಂದೆ ಮೂರುಬಾರಿ ಸಂಘದ ಮೇಲೆ ನಿಷೇಧ ಹೇರಿದರೂ ಜನಬೆಂಬಲದಿಂದ ಸಂಘ ಮತ್ತಷ್ಟು ಬಲವಾಗಿ ಬೆಳೆಯಿತು ಎಂದು ಹೇಳಿದರು.