ಫಕೃದ್ದೀನ್ ಎಂ.ಎನ್
ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಹೆಸರು ನೋಂದಾಯಿಸಲು ನ. 6 ಕೊನೆಯ ದಿನವಾಗಿದ್ದರೂ ನವಲಗುಂದ ಕ್ಷೇತ್ರದಲ್ಲಿ ನೋಂದಣಿಗೆ ಪದವೀಧರರು ನಿರಾಸಕ್ತಿ ವಹಿಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಿಂದ 2347 ಪದವೀಧರರು ನೋಂದಣಿಯಾಗಿದ್ದರು. ಆದರೆ, ಈ ಬಾರಿ 738 ಪದವೀಧರರು ಮಾತ್ರ ಮತದಾನ ನೋಂದಣಿಗೆ ನಮೂನೆ-18 ಭರ್ತಿ ಮಾಡಿ ಸಲ್ಲಿಸಿದ್ದಾರೆ. ಬಾಕಿ ಉಳಿದ 6 ದಿನಗಳಲ್ಲಿ ಮತ್ತಷ್ಟು ಪದವೀಧರರನ್ನು ನೋಂದಣಿ ಮಾಡಿಸಲು ಪ್ರಯತ್ನ ಆರಂಭಿಸಿದ್ದಾರೆ.ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕು ಆಡಳಿತ ಸಹ ಮತದಾನ ನೋಂದಣಿಗಾಗಿ ಪದವೀಧರರಲ್ಲಿ ಮನವಿ ಮಾಡುತ್ತಿದೆ. ತಹಸೀಲ್ದಾರ್ ಕಚೇರಿಗಳಲ್ಲಿ ನಮೂನೆ 18 ಅರ್ಜಿಯನ್ನು ವಿತರಿಸುತ್ತಿದ್ದು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸುವಂತೆ ಅಧಿಕಾರಿಗಳು ಕೋರುತ್ತಿದ್ದಾರೆ. ಅಷ್ಟಾದರೂ ಪದವೀಧರರು ನೋಂದಣಿಗೆ ನಿರಾಸಕ್ತಿ ತೋರಿದ್ದಾರೆ.
2022ರ ನವೆಂಬರ್ 1ಕ್ಕೂ ಮುಂಚೆ ಪದವಿ ಪಡೆದ ಎಲ್ಲರೂ ಮತದಾನಕ್ಕೆ ನೋಂದಣಿ ಮಾಡಿಸಬಹುದಾಗಿದೆ. ಮೂರು ವರ್ಷಗಳ ಡಿಪ್ಲೊಮಾ ಪದವಿ ಪಡೆದವರಿಗೂ ಈ ಬಾರಿ ಮತದಾನ ನೋಂದಣಿಗೆ ಅವಕಾಶ ನೀಡಲಾಗಿದೆ.
ಕ್ಷೇತ್ರದ ಮತದಾರರಾಗಿರುವ ಹಲವು ಪದವೀಧರರು ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ತಹಸೀಲ್ದಾರ್ ಕಚೇರಿಗೆ ಖುದ್ದಾಗಿ ಅರ್ಜಿ ಸಲ್ಲಿಸುವಂತೆ ಚುನಾವಣೆ ಆಯೋಗ ಹೇಳಿದೆ. ಹೀಗಾಗಿ ಅವರು ಬರಲು ಸಮಯದೊಂದಿಗೆ ಹಣವೂ ಖರ್ಚಾಗುತ್ತದೆ. ಹೀಗಾಗಿ ಯಾರು ಆಸಕ್ತಿ ತೋರುತ್ತಿಲ್ಲವೆಂದು ಕೆಲವು ಪದವೀಧರರು ಹೇಳುತ್ತಿದ್ದಾರೆ.
ಬಸನಗೌಡ ಮುದಿಗೌಡ್ರ, ಪದವೀಧರ
ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ 18 ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ನ. 6ರೊಳಗೆ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿ ಅಥವಾ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸಲ್ಲಿಸಬಹುದು.