ಗದಗ: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಆದರ ಆಶಯಗಳನ್ನು ಕೊಲೆ ಮಾಡಿ ಅದನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂದಿನಿಂದಲೂ ಬಂದಿದೆ. ಕಾಂಗ್ರೆಸ್ ಡಿಎನ್ಎದಲ್ಲಿರುವ ದೇಶ, ಸಂವಿಧಾನ ವಿರೋಧಿ ಮನಸ್ಥಿತಿ ಜನರಿಗೆ ತಿಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಶುಕ್ರವಾರ ಗದಗ ನಗರದಲ್ಲಿ ವಿಠಲಾಪುರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನ ಅಧ್ಯಾಯ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.1951ರಿಂದಲೇ ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತ ಬಂದಿದೆ. 1971ರಲ್ಲಿ ಕಾಂಗ್ರೆಸ್ಸಿನ ವಿರೋಧಿ ಪಕ್ಷಗಳು ಒಂದಾಗಿ ರಾಯಬರೇಲಿ ಕ್ಷೇತ್ರದಲ್ಲಿ ರಾಜನಾರಾಯಣ ಎಂಬುವರನ್ನು ಚುನಾವಣೆಗೆ ನಿಲ್ಲಿಸುತ್ತಾರೆ. ಚುನಾವಣೆಯಲ್ಲಿ ಇಂದಿರಾಗಾಂಧಿ ಗೆಲ್ಲುತ್ತಾರೆ. ರಾಜನಾರಾಯಣ ಅವರು ಕೋರ್ಟ್ ಮೆಟ್ಟಿಲೇರಿದರು. ಇಂದಿರಾಗಾಂಧಿ ಗೆಲವು ಅನೂರ್ಜಿತಗೊಂಡು, 6 ವರ್ಷ ಚುನಾವಣೆ ನಿಲ್ಲದಂತೆ ಆದೇಶಿಸಿತು. ಮುಂದೆ ಇಂದಿರಾಗಾಂಧಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ತೀರ್ಪು ಬಂದು, ಇಂದಿರಾಗಾಂಧಿ ಚುನಾವಣೆ ಸ್ಪರ್ಧಿಸಬಹುದು ಆದರೆ, ಮತ ಹಾಕುವಂತಿಲ್ಲ ಎಂದು ತೀರ್ಪು ನೀಡಿತು. ಇದರಿಂದ ಇಂದಿರಾಗಾಂಧಿ ವಿಚಲಿತಗೊಂಡರು. ಇದರಿಂದ ಸಂವಿಧಾನ ಕಲಂ 38, 40, 41ಕ್ಕೆ ತಿದ್ದುಪಡಿ ತಂದು ತಮ್ಮ ಆಯ್ಕೆಯನ್ನು ಎಲ್ಲೂ ಪ್ರಶ್ನಿಸಿದಂತೆ ಚಕ್ರವ್ಯೂಹ ರೂಪಿಸಿಕೊಂಡರು. ಜೂ.25, 1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು.
ಜನರನ್ನು ಬೌದ್ಧಿಕ ಆಘಾತಕ್ಕೆ ಒಳಪಡಿಸಲಾಯಿತು. ಜಯಪ್ರಕಾಶ ನಾರಾಯಣ ಅವರನ್ನು ಬಂಧಿಸಲಾಯಿತು. ಅವರಿಗೆ ಔಷಧಿ ಪೂರೈಸಲಿಲ್ಲ. ಕಾಂಗ್ರೆಸ್ಸಿನ ನಕಲಿ ಗಾಂಧಿ ಕುಟುಂಬದವರಿಂದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಕೇಂದ್ರದ ವಿರೋಧ ಪಕ್ಷಗಳಿಂದ ದೇಶಕ್ಕೆ ಆತಂಕ ಇದೆ. ಆದರೆ, ನರೇಂದ್ರ ಮೋದಿ ಅವರ ಅಧಿಕಾರದಲ್ಲಿ ದೇಶದ ಭದ್ರತೆ, ಅಖಂಡತೆ ಜತೆ ರಾಜೀ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಸಿನ ನಕಲಿ ಗಾಂಧಿಗಳು ಭಾರತೀಯ ಜನರನ್ನು ಆಳುತ್ತ ಬಂದರೇ ವಿನಹ ಜನರ ಅಭಿವೃದ್ಧಿಯ ವಿಚಾರವೇ ಅವರ ಹತ್ತಿರ ಸುಳಿಯಲ್ಲಿಲ್ಲ.
ಸಚಿವ ಎಚ್.ಕೆ. ಪಾಟೀಲರೇ ಕಾನೂನು ಮಂತ್ರಿಯಾಗಿ ತುರ್ತುಪರಿಸ್ಥಿತಿಯನ್ನು ಸ್ವಾಗತಿಸುತ್ತೀರಾ? ಒಪ್ಪಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದ ಬೊಮ್ಮಾಯಿ ಒಂದು ವೇಳೆ ನೀವು ಒಪ್ಪಿಕೊಂಡರೆ ಸಂವಿಧಾನ ಹಿಡಿಯುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಇಂದಿರಾಗಾಂಧಿ ದಬ್ಬಾಳಿಕೆ ಮೂಲಕ ತುರ್ತು ಪರಿಸ್ಥಿತಿ ಹೇರಿದ್ದರು. ಅವರ ನಂತರ ಅವರ ಪುತ್ರರು ಅದೇ ಮಾದರಿಯ ದುರಾಳಿತ ನಡೆಸಿ, ಸಂವಿಧಾನ ಹತ್ಯೆ ಮಾಡಿದವರು ಕಾಂಗ್ರೆಸ್ ಪಕ್ಷದ ಮುಖಂಡರು. ಈಗ ಸಂವಿಧಾನ ರಕ್ಷಿಸಿ ಎಂದು ಡಾಂಭಿಕತನ ತೋರಿಸುತ್ತಿದ್ದಾರೆ ಎಂದರು.
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮುಂತಾದವರು ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದ ಕೃಷ್ಣ ಹೊಂಬಾಳಿ ಅವರನ್ನು ಸನ್ಮಾನಿಸಲಾಯಿತು.ರಾಜು ಕುರಡಗಿ, ಲಿಂಗರಾಜ ಪಾಟೀಲ, ಎಂ.ಎಸ್. ಕರಿಗೌಡರ, ಮಹೇಂದ್ರ ಕೌತಾಳ, ಮಂಜುನಾಥ ಮುಳಗುಂದ, ಮೋಹನ ಮಾಳಶೆಟ್ಟಿ ಮುಂತಾದವರು ಹಾಜರಿದ್ದರು.
ಸಂಘ ಪರಿವಾರವನ್ನು ನಿಷೇಧದ ಬಗ್ಗೆ ಈಗ ಕೆಲವರು ಮಾತನಾಡುತ್ತಿದ್ದಾರೆ. ನೆಹರು ಕಾಲದಿಂದಲೂ ಇದನ್ನೇ ಹೇಳುತ್ತಿದ್ದಾರೆ. ದೇಶಭಕ್ತ ಸಂಘಟನೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.