ಪ್ರತ್ಯೇಕ ತಂಬಾಕು ಮಾರಾಟ ಪರವಾನಿಗೆ ಕಡ್ಡಾಯ

KannadaprabhaNewsNetwork |  
Published : Jul 11, 2025, 11:48 PM IST
ಪೋಟೋ, 11ಎಚ್‌ಎಸ್‌ಡಿ3: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ವೆಂಕಟೇಶ್‌  ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಾಣಿಜ್ಯ ಉದ್ದಿಮೆ ಪರವಾನಿಗೆ ಪಡೆದು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲಾ ಅಂಗಡಿಗಳು ಪ್ರತ್ಯೇಕವಾಗಿ ತಂಬಾಕು ಮಾರಾಟ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ಶೇ.90 ರಷ್ಟು ಅಂಗಡಿಗಳಿಗೆ ತಿಂಗಳ ಒಳಗಾಗಿ ಪ್ರತ್ಯೇಕ ಪರವಾನಿಗೆ ನೀಡುವ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿ ನಡೆದ ತ್ರೈಮಾಸಿಕ ಸಭೆಯಲ್ಲಿಯೇ, ಪ್ರತ್ಯೇಕವಾಗಿ ತಂಬಾಕು ಮಾರಾಟ ಪರವಾನಿಗೆ ನೀಡುವಂತೆ ಸೂಚಿಸಲಾಗಿತ್ತು. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪರವಾನಿಗೆ ನೀಡುವ ಕೆಲಸವಾಗಿಲ್ಲ. ಕೋಟ್ಪಾ ಕಾಯ್ದೆಯ ಅನುಸಾರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಪ್ರತಿ ನಗರಸಭೆ ವ್ಯಾಪ್ತಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಟೀ ಹಾಗೂ ಪಾನ್ ಶಾಪ್‍ಗಳಿಗೆ ವ್ಯಾಪಾರ ಪರವಾನಿಗೆ ನೀಡುವಾಗಲೇ, ಪ್ರತ್ಯೇಕವಾಗಿ ತಂಬಾಕು ಮಾರಾಟದ ಪರವಾನಿಗೆ ಪಡೆಯುವಂತೆ ಷರತ್ತು ವಿಧಿಸಬೇಕು. ನಗರಸಭೆ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದಿಮೆ ಹಾಗೂ ವ್ಯಾಪಾರ ಪರವಾನಿಗೆ ಜೊತೆಗೆ, ತಂಬಾಕು ಮಾರಾಟ ಪರವಾನಿಗೆ ನೀಡಿದ ಕ್ರೂಢೀಕೃತ ವಿವರವನ್ನು ಎಂ.ಎಸ್.ಎಕ್ಸ್‌ನಲ್ಲಿ ಒದಗಿಸಬೇಕು. ತಿಂಗಳ ಒಳಗೆ ನಿಗದಿಪಡಿಸಿದ ಗುರಿ ಸಾಧಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

*ಉಲ್ಲಂಘನೆ ಕಂಡುಬಂದಲ್ಲಿ ಲೈಸೆನ್ಸ್ ರದ್ದು: ಅಧಿಕಾರಿಗಳು ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಈ ನಿಯಮ ಪಾಲನೆ ಆಗುತ್ತಿದೆಯೇ ಇಲ್ಲವೆ ಎಂಬುದರ ಬಗ್ಗೆ ಕಾಲಕಾಲಕ್ಕೆ ಪರಿಶೀಲಿಸಬೇಕು, ಉಲ್ಲಂಘನೆ ಕಂಡುಬಂದಲ್ಲಿ ಲೈಸೆನ್ಸ್ ರದ್ಧತಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಟೇಬಲ್‍ಗಳಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಒದಗಿಸುವುದಕ್ಕೆ ನಿಷೇಧವಿದೆ. ಪ್ರತಿ ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಪ್ರತ್ಯೇಕ ತಂಬಾಕು ಸೇವನಾ, ಧೂಮಪಾನ ವಲಯಗಳನ್ನು ನಿರ್ಮಿಸಬೇಕು. ಈ ನಿಯಮ ಪಾಲನೆ ನಂತರವೇ ಅಬಕಾರಿ ಇಲಾಖೆಯಿಂದ ಪರವಾನಿಗೆ ನೀಡಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಆಶಾಲತಾ.ಕೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಶಾಲಾ, ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ಮಾಡಬೇಕು, ಪ್ರತಿಯೊಂದು ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಈ ಬಗ್ಗೆ ಬೋರ್ಡ್ ಹಾಕಿಸಬೇಕು, ಅಲ್ಲದೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿನ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನಗಳು ಮಾರಾಟ ಆಗದಂತೆ ಅಧಿಕಾರಿಗಳು ಆಗಿಂದಾಗ್ಗೆ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು.

*ದಂಡ ಹೆಚ್ಚಳ: ಸಾರ್ವಜನಿಕ ಸ್ಥಳಗಳಲ್ಲಿ, ನಿಷೇಧಿತ ವಲಯದಲ್ಲಿ ತಂಬಾಕು ಉತ್ಪನ್ನ ಸೇವನೆ, ಧೂಮಪಾನ ಹಾಗೂ ಉಗುಳುವುದನ್ನು ಕಾಯ್ದೆಯನ್ವಯ ನಿಷೇಧಿಸಲಾಗಿದ್ದು, ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 200 ರು. ಗಳಿಂದ 1,000 ರು. ವರೆಗೆ ಹೆಚ್ಚಿಸಲಾಗಿದೆ ಎಂದು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಭುದೇವ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯ್ಕ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ, ತಂಬಾಕು ನಿಯಂತ್ರಣ ಕೋಶ ವಿಭಾಗೀಯ ಸಂಯೋಜಕ ಮಹಾಂತೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

4,801 ಪ್ರಕರಣ 3,39,920 ರು.ದಂಡ ವಸೂಲಿ:

ಜಿಲ್ಲಾ ಅಪರಾಧ ದಾಖಲೆ ಬ್ಯೂರೋ ವರದಿ ಅನುಸಾರ 2025ರ ಏಪ್ರಿಲ್‌ನಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಅಡಿ ಒಟ್ಟು 4,801 ಪ್ರಕರಣಗಳನ್ನು ದಾಖಲಿಸಿ ಒಟ್ಟು 3,39,920 ರು. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ ಮಾಹಿತಿ ನೀಡಿದರು. ಪೊಲೀಸ್ ಇಲಾಖೆ ವತಿಯಿಂದ 2,764 ಪ್ರಕರಣ ದಾಖಲಿಸಿ 2,22,450 ರು.ದಂಡ ವಸೂಲಿ ಮಾಡಿದ್ದು, ಅಬಕಾರಿ ಇಲಾಖೆ ವತಿಯಿಂದ 27 ಪ್ರಕರಣಗಳನ್ನು ದಾಖಲಿಸಿ 2,800 ದಂಡ ವಸೂಲಿ ಮಾಡಲಾಗಿದೆ. ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ನಿಯಂತ್ರ ಕೋಶದಿಂದ 317 ಪ್ರಕರಣ ದಾಖಲಿಸಿ 36,350 ದಂಡ ವಸೂಲಿ ಮಾಡಲಾಗಿದೆ. ಇತರೆ ಸ್ಥಳೀಯ ಸಂಸ್ಥೆಗಳು ಅಧಿಕಾರಿಗಳು ಸಹ ನಿಯಮಿತವಾಗಿ ದಾಳಿ ನಡೆಸಿ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು ತಂಬಾಕು ಮುಕ್ತ ಗ್ರಾಮಗಳ ಘೋಷಣೆ

ಜಿಲ್ಲೆಯಲ್ಲಿ ಒಟ್ಟು 14 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮ ಎಂದು ಘೊಷಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ, ಮಳಲಿ, ಹಾಯಿತೋಳು ಲಂಬಾಣಿಹಟ್ಟಿ, ಹೊಳಲ್ಕೆರೆಯ ಗರಗ, ಮಹದೇವಪುರ, ಕುಟಿಗೇಹಳ್ಳಿ, ಅಂದನೂರು ಗೊಲ್ಲರಹಟ್ಟಿ, ಹೊಸದುರ್ಗದ ರಂಗಾಪುರ, ಬೇವಿನಹಳ್ಳಿ, ಅರಸಿನತೋಟ, ಸಣ್ಣತಿಪ್ಪೇನಹಳ್ಳಿ, ಚಳ್ಳಕೆರೆಯ ಓಬಯ್ಯನಹಟ್ಟಿ ಗೊಲ್ಲರಹಟ್ಟಿ, ಹಿರಿಯೂರಿನ ಡಿ.ಕೆ.ಹಟ್ಟಿ, ಮೊಳಕಾಲ್ಮೂರಿನ ತುಪ್ಪದಕ್ಕನಹಳ್ಳಿಗಳು ತಂಬಾಕು ಮುಕ್ತವಾಗಲಿವೆ .ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1,978 ಜನರು ಸೇವೆ ಪಡೆದಿದ್ದಾರೆ. 183 ಜನರು ಚಿಕಿತ್ಸೆ ಪಡೆದಿದ್ದಾರೆ. 25 ಜನರು ತಂಬಾಕು ಸೇವನೆ ತ್ಯಜಿಸಿದ್ದಾರೆ ಎಂದು ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಬಿ.ಎನ್. ಪ್ರಭುದೇವ ತಿಳಿಸಿದರು.

PREV