ಕೇಂದ್ರ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ ಕಾರ್ಪೊರೇಟ್ ಹಿತಾಸಕ್ತಿಗೆ ಸೇವೆ ಸಲ್ಲಿಸುವ, ಸಾಮಾನ್ಯ ಜನವಿರೋಧಿ ಬಜೆಟ್ ಆಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂ. ಪಿ.ವಿ. ಲೋಕೇಶ್ ಆರೋಪಿಸಿದ್ದಾರೆ.
- ₹53.47 ಲಕ್ಷ ಕೋಟಿ ಬಜೆಟ್‌ನಲ್ಲಿ ರೈತರು, ಕಾರ್ಮಿಕರು, ಯುವಕರಿಗೆ ಅನ್ಯಾಯ
- - -ಕನ್ನಡಪ್ರಭ ವಾರ್ತೆ ಹರಿಹರ
ಕೇಂದ್ರ ಸರ್ಕಾರ ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ ಕಾರ್ಪೊರೇಟ್ ಹಿತಾಸಕ್ತಿಗೆ ಸೇವೆ ಸಲ್ಲಿಸುವ, ಸಾಮಾನ್ಯ ಜನವಿರೋಧಿ ಬಜೆಟ್ ಆಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂ. ಪಿ.ವಿ. ಲೋಕೇಶ್ ಆರೋಪಿಸಿದರು.ನಗರದ ಹೊರಭಾಗದಲ್ಲಿರುವ ದಿ. ಪ್ರೊ. ಬಿ.ಕೃಷ್ಣಪ್ಪ ಭವನ, ಮೈತ್ರಿವನದಲ್ಲಿ ನಡೆದ ಅಖಿಲ ಭಾರತ ಕಿಸಾನ್ ಸಭಾ ರಾಜ್ಯಮಟ್ಟದ ಅಧ್ಯಯನ ಶಿಬಿರದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
₹53.47 ಲಕ್ಷ ಕೋಟಿ ಮೊತ್ತದ ಬಜೆಟ್‌ಗೆ ಕೇಂದ್ರ ಸರ್ಕಾರದ ವಾರ್ಷಿಕ ಆದಾಯ ₹53.33 ಲಕ್ಷ ಕೋಟಿ ಮಾತ್ರವಿದೆ. ಕೊರತೆ ಸರಿಪಡಿಸಲು ಈ ವರ್ಷವೇ ₹16.95 ಲಕ್ಷ ಕೋಟಿ ಸಾಲ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ದೇಶದ ಜನರ ಮೇಲೆ ಸಾಲದ ಭಾರ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದುವರೆಗೆ ಮಂಡಿಸಿದ ಬಜೆಟ್‌ಗಳಿಂದ ದೇಶದ ಜನರ ಮೇಲೆ ಒಟ್ಟು ₹214 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.ಈ ವರ್ಷದ ಬಜೆಟ್‌ನಲ್ಲಿ ಆಹಾರ ಭದ್ರತೆ ಹಾಗೂ ಕೃಷಿ ಕ್ಷೇತ್ರಕ್ಕೆ ಕೇವಲ ₹1.63 ಲಕ್ಷ ಕೋಟಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ₹95,692 ಕೋಟಿ, ಆರೋಗ್ಯ ಕ್ಷೇತ್ರಕ್ಕೆ ₹1.06 ಲಕ್ಷ ಕೋಟಿ, ಶಿಕ್ಷಣಕ್ಕೆ ₹1.39 ಲಕ್ಷ ಕೋಟಿ ಮಾತ್ರ ಮೀಸಲಿಡಲಾಗಿದೆ. ಆದರೆ, ಕಾರ್ಪೊರೇಟ್ ವಲಯಕ್ಕೆ ಶೇ.180ರಷ್ಟು ಲಾಭವಾಗಿದೆ. ದೇಶದ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ತೆರಿಗೆಯ ಪಾಲು ಶೇ.110ರಷ್ಟೇ ಇದೆ. ಇದು ಸಂಪತ್ತಿನ ಅಸಮಾನ ಹಂಚಿಕೆ ಸ್ಪಷ್ಟಪಡಿಸುತ್ತದೆ ಎಂದರು.
ಯುವಕರಿಗೆ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆಗಳಿಲ್ಲ. ರೈತರು, ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಜೀವನ ಭದ್ರತೆಗೆ ಬಜೆಟ್‌ನಲ್ಲಿ ಯಾವುದೇ ಗಂಭೀರ ಕ್ರಮಗಳಿಲ್ಲ. ‘ಎಲ್ಲರೊಂದಿಗೆ ಎಲ್ಲರ ವಿಶ್ವಾಸ’, ‘ಆತ್ಮನಿರ್ಭರ ಭಾರತ’ ಘೋಷಣೆಗಳಿಗೆ ಈ ಬಜೆಟ್ ಸಂಪೂರ್ಣ ವಿರುದ್ಧವಾಗಿದೆ. ಕಾರ್ಪೊರೇಟ್ ಹೂಡಿಕೆದಾರರ ಹಿತರಕ್ಷಣೆಗಾಗಿ ಸಾಲದ ಹೊರೆ ಹೆಚ್ಚಿಸುವ ಜನವಿರೋಧಿ ಬಜೆಟ್ ಇದಾಗಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭ ರಾಜ್ಯ ಕಾರ್ಯದರ್ಶಿ ಕಾಂ. ಕೆ.ಎಸ್. ಜನಾರ್ದನ, ರಾಜ್ಯ ಉಪಾಧ್ಯಕ್ಷ ಕಾಂ. ಎಂ.ಸಿ. ದೊಂಗ್ರೆ, ರಾಜ್ಯ ಖಜಾಂಚಿ ಕಾಂ. ಶಾಂತರಾಜ್ ಜೈನ್, ಜಿಲ್ಲಾ ಅಧ್ಯಕ್ಷ ಕಾಂ. ಎಚ್.ಜಿ. ಉಮೇಶ್, ಜಿಲ್ಲಾ ಕಾರ್ಯದರ್ಶಿ ಕಾಂ. ಐರಣಿ ಚಂದ್ರು, ಕಾಂ. ಮೌಲಾ ಮುಲ್ಲಾ ಉಪಸ್ಥಿತರಿದ್ದರು.
- - --03HRR.03:
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂ. ಪಿ.ವಿ. ಲೋಕೇಶ್ ಮಾತನಾಡಿದರು. ಕೆ.ಎಸ್. ಜನಾರ್ದನ, ಎಂ.ಸಿ. ದೊಂಗ್ರೆ, ಶಾಂತರಾಜ್ ಜೈನ್ ಇತರರು ಇದ್ದರು.