- ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ
ಆಸೆಯೇ ದುಃಖಕ್ಕೆ ಮೂಲ,ಧರ್ಮ ರಹಸ್ಯ ತಿಳಿದುಕೊಂಡರೆ ಸುಖ, ದುಃಖ ಸಮನಾಗಿ ತೆಗೆದುಕೊಳ್ಳಬಹುದು ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತಪೀಠ, ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಂಗಳವಾರ ನಡೆದ ಶ್ರೀ ದತ್ತಾತ್ರೇಯ ಜಯಂತಿಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಇಂದು ಅತ್ಯಂತ ಪವಿತ್ರವಾದ ದಿನ. ಕಾಮ, ಕ್ರೋಧ ಲೋಭ, ಮತ್ಸರ ಎಲ್ಲವನ್ನು ಬಿಟ್ಟು ದತ್ತ ಉಪಾಸನೆ ಮಾಡಬೇಕು ಎಂದು ಹೇಳಿದರು.ಈ ಶರೀರ ನಶ್ವರ, ದತ್ತನ ಉಪದೇಶ ಏನೆಂದರೆ ನಾವು ಸುಖ ಅನುಭವಿಸಿದಂತೆಯೇ. ಅದರ ಹಿಂದೆ ದುಃಖವೂ ಇರುತ್ತದೆ. ಹಾಗಾಗಿ ಎಲ್ಲಾ ಇಂದ್ರಿಯಗಳನ್ನು ನಿಗ್ರಹ ಮಾಡಬೇಕು. ಸುಖ, ಲೋಭ, ಆಸೆಯೇ ದುಃಖಕ್ಕೆ ಮೂಲ. ಸುಖ ಮಾತ್ರ ಬೇಕು ಅಂದುಕೊಳ್ಳಬಾರದು. ಸುಖ ದುಃಖ ಎರಡನ್ನು ಸಮಾನವಾಗಿ ಅನುಭವಿಸಬೇಕು ಎಂದರು.
ಇದೇ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮರಾಠಿ ಭಾಷೆಯ ದತ್ತ ದರ್ಶನಂ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಅವಧೂತ ದತ್ತಪೀಠದ ಕಿರಿಯಶ್ರೀಗಳಾದ ಶ್ರೀ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಇದ್ದರು.
ದತ್ತಾತ್ರೇಯ ಜಯಂತಿ ಆಚರಣೆ
ದೇಶ ವಿದೇಶಗಳಿಂದ ಬಂದಿದ್ದ ನೂರಾರು ಭಕ್ತಾರಿಂದ ಶ್ರೀ ದತ್ತಾತ್ರೇಯ ಸ್ವಾಮಿಗೆ ಸಹಸ್ರ ಕಲಶ ತೈಲಾಭಿಷೇಕವನ್ನು ನೆರವೇರಿಸಲಾಯಿತು. ಈ ವೇಳೆ ಕೊಚ್ಚಿ ಆಶ್ರಮ ಭಜನಾ ತಂಡದವರಿಂದ ನಾಮ ಸಂಕೀರ್ತನ ನಡೆಯಿತು.