ಕೊಟ್ಟೂರು: ಅದ್ಧೂರಿಯ ಶಿಖರ ತೈಲಾಭಿಷೇಕಕ್ಕೆ ತಾಲೂಕಿನ ಉಜ್ಜಯಿನಿ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನ ಪಾತ್ರವಾಗಿದೆ. ರಾಷ್ಟ್ರದಲ್ಲಿಯೇ ವಿಶಿಷ್ಟ ಆಚರಣೆಯ ಈ ಧಾರ್ಮಿಕ ಪರಂಪರೆಗೆ ಉಜ್ಜಯಿನಿ ಸುಕ್ಷೇತ್ರ ಸೋಮವಾರ ಸಂಜೆ ೫.೫೮ಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿನ ದೇವರ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ ಮಾಡುವುದು ರೂಢಿಯಲ್ಲಿದ್ದರೆ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿಗೆ ತೈಲಾಭಿಷೇಕ ನೆರವೇರುವುದು ನಿಜಕ್ಕೂ ವೈಶಿಷ್ಟ ಪೂರ್ಣ.
ರಥೋತ್ಸವದ ನಂತರದ ಎರಡನೇ ದಿನದ ಸದ್ಧರ್ಮ ಪೀಠದ ವಾರ್ಷಿಕ ಧಾರ್ಮಿಕ ಕೈಂಕರ್ಯದಂತೆ ಶಿಖರ ತೈಲಾಭಿಷೇಕ ನೆರವೇರಿತು. ಎಂದಿನಂತೆ ಜರ್ಮಲಿ ಪಾಳೆಗಾರ ಮನೆತನದವರು ಮಣ್ಣಿನ ಕುಡಿಕೆಯಲ್ಲಿ ಕಳುಹಿಸಿದ್ದ ತೈಲವನ್ನು ಆಯಾಗಾರ ಬಳಗದವರು ಶಿಖರದ ಮೇಲೆ ಸುರಿದರು. ನಂತರ ಇತರ ಭಕ್ತರು ಡಬ್ಬಗಟ್ಟಲೇ ಭಕ್ತಿಯ ಕಾಣಿಕೆಯಾಗಿ ನೀಡಿದ ಎಣ್ಣೆಯನ್ನು ಅಡಿಯಿಂದ ಮುಡಿವರೆಗೆ ಎರೆಯಲಾಯಿತು.
ಶಾಪ ವಿಮೋಚನೆಯ ಕಾರಣಕ್ಕಾಗಿ ಜರ್ಮಲಿ ಪಾಳೆಗಾರ ವಂಶಸ್ಥರು ಗುರುಮರುಳಸಿದ್ದೇಶ್ವರಗೆ ಎಣ್ಣೆ ಕಳುಹಿಸಿಕೊಡುವ ಪದ್ಧತಿಯಂತೆ ಪಾಳೆಗಾರ ಮನೆತನದ ಕೆಲವರು ಪಾದಯಾತ್ರೆ ಮೂಲಕ ಎರಡು ಮಡಿಕೆಯ ಕೊಡಗಳಲ್ಲಿ ಎಣ್ಣೆಯನ್ನು ದೂರದ ಜರ್ಮಲಿಯಿಂದ ಉಜ್ಜಯಿನಿಗೆ ಸೋಮವಾರದ ಮಧ್ಯಾಹ್ನದ ಅವಧಿಗೆ ತಂದರು.ನಂತರ ಈ ಎಣ್ಣೆಯನ್ನು ಸದ್ಧರ್ಮ ಪೀಠದ ಆಯಗಾರ ಬಳಗದವರು ಬರಮಾಡಿಕೊಂಡು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಂದರು.
ಈ ಘಳಿಗೆಯಿಂದಲೇ ಶಿಖರಕ್ಕೆ ಎಣ್ಣೆಯಿಂದ ಮಜ್ಜನಗೊಳಿಸುವ ಕಾರ್ಯ ಸುಮಾರು ಮುಕ್ಕಾಲು ಗಂಟೆಯವರೆಗೆ ನಡೆಯಿತು. ಎಣ್ಣೆಯ ಮಜ್ಜನದಿಂದ ಶಿಖರ ಸಂಪೂರ್ಣ ಒದ್ದೆಯಾಗಿತು. ಈ ಬಗೆಯ ಶಿಖರದ ಮೇಲೆ ನಿಂತೆ ಸುಮಾರು ೨೦ಕ್ಕೂ ಹೆಚ್ಚು ಆಯಗಾರ ಬಳಗದವರು ಕೆಳಗೆ ಜಾರಿ ಬೀಳುವ ಅಪಾಯವನ್ನು ಲೆಕ್ಕಿಸದೇ ತೈಲಾಭಿಷೇಕ ನೇರವೇರಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ನೆರದಿದ್ದ ಎಲ್ಲರನ್ನು ಬೆರಗುಗೊಳಿಸಿತು.
ಶ್ರೀ ಸ್ವಾಮಿಯ ತೈಲಾಭಿಷೇಕ ನೆರವೇರಿಸಿದರೆ ಶನಿದೋಷ ನಿವಾರಣೆಯಾಗುವ ಸಲುವಾಗಿ ಈ ಪರಂಪರೆ ಮುಂದುವರೆದಿದೆ. ಭಕ್ತರಿಗೆ ಒಳಿತಾಗಿ ಅವರ ಕಷ್ಟಗಳು ನಿವಾರಣೆಯಾಗುತ್ತದೆ. ಈ ಕಾರಣಕ್ಕಾಗಿ ಈ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಿರುವುದೇ ಸಾಕ್ಷಿ ಎನ್ನುತ್ತಾರೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು.