ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೂಡದ ಒಮ್ಮತ

KannadaprabhaNewsNetwork | Published : Sep 2, 2024 2:05 AM

ಸಾರಾಂಶ

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಸದಸ್ಯರ ಹೆಸರು ಸೂಚಿಸುವಂತೆ ತಿಳಿಸಿತ್ತು. ಅದಕ್ಕೆ ಸದಸ್ಯರು ಕಾಲವಕಾಶ ಪಡೆದಿದ್ದರು. ಆದರೆ ಒಮ್ಮತ ಮೂಡಿಲ್ಲ. ಹೀಗಾಗಿ ಆಯ್ಕೆ ನಿರ್ಧಾರ ಮತ್ತೊಮ್ಮೆ ಹೈಕಮಾಂಡ್ ಎದುರು ಬಂದಿದೆ

ಎಸ್.ಎಂ. ಸೈಯದ್ ಗಜೇಂದ್ರಗಡ

ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.೩ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ೫ ಸದಸ್ಯರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ೪ ಸದಸ್ಯರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರಿಗೆ ಅಸ್ತು ಎನ್ನಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಮೀಸಲು ಪ್ರಕಟವಾಗಿದ್ದು, ಕೊನೆಯ ೧೪ ತಿಂಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೇರಲು ಬಿಜೆಪಿಯ ಕೆಲವು ಸದಸ್ಯರು ಭರ್ಜರಿ ಕಸರತ್ತು ನಡೆಸಿದ್ದರು. ಹೀಗಾಗಿ ಹೈಕಮಾಂಡ್ ಇತ್ತೀಚೆಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆ ಸದಸ್ಯರ ಸಭೆ ನಡೆಸಿ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಮ್ಮತದ ಸದಸ್ಯರ ಹೆಸರು ಸೂಚಿಸುವಂತೆ ತಿಳಿಸಿತ್ತು. ಅದಕ್ಕೆ ಸದಸ್ಯರು ಕಾಲವಕಾಶ ಪಡೆದಿದ್ದರು. ಆದರೆ ಒಮ್ಮತ ಮೂಡಿಲ್ಲ. ಹೀಗಾಗಿ ಆಯ್ಕೆ ನಿರ್ಧಾರ ಮತ್ತೊಮ್ಮೆ ಹೈಕಮಾಂಡ್ ಎದುರು ಬಂದಿದೆ.

ಪಟ್ಟಣದ ಪುರಸಭೆಗೆ ೨೩ ಸ್ಥಾನಗಳಿದ್ದು, ೧೮ ಬಿಜೆಪಿ ಹಾಗೂ ೫ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಬಿಜೆಪಿ ಮೊದಲ ಹಂತದ ಅಧಿಕಾರ ಅವಧಿಗೆ ವೀರಪ್ಪ ಪಟ್ಟಣಶೆಟ್ಟಿ ಅಧ್ಯಕ್ಷರಾಗಿ, ಲೀಲಾವತಿ ವನ್ನಾಲ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಹೀಗಾಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಸಿಗದಿದ್ದರಿಂದ ನಿರಾಸೆಗೊಂಡಿದ್ದ ಸದಸ್ಯರು ಈಗ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅಲಂಕರಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸುಭಾಸ ಮ್ಯಾಗೇರಿ, ಯಮನೂರ ತಿರಕೋಜಿ, ದಾಕ್ಷಾಯಣಿ ಚೋಳಿನ, ಉಮಾ ಮ್ಯಾಕಲ್, ಮುದಿಯಪ್ಪ ಮುಧೋಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೀಲಾ ಸವಣೂರ, ಸುಜಾತಾ ಶಿಂಗ್ರಿ, ವಿಜಯಾ ಮಳಗಿ, ಲಕ್ಷ್ಮೀ ಮುಧೋಳ ಆಕ್ಷಾಂಕ್ಷಿಗಳಾಗಿದ್ದಾರೆ. ಈ ಪಟ್ಟಿ ಹೈಕಮಾಂಡ್ ಎದುರುಗಿದೆ. ಹೀಗಾಗಿ ನಾಳೆ ನಡೆಯುವ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡಲಿದೆ ಎಂಬುದರ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.

ಸುಭಾಸ ಮ್ಯಾಗೇರಿ-ಯಮನೂರ ತಿರಕೋಜಿ ನಡುವೆ ಫೈಟ್: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೇರಲು ಪ್ರಬಲವಾಗಿ ೧೯ನೇ ವಾರ್ಡಿನ ಸುಭಾಸ ಮ್ಯಾಗೇರಿ ಹಾಗೂ ೨ನೇ ವಾರ್ಡಿನ ಯಮನೂರ ತಿಕರೋಜಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಆದರೆ ಬಿಜೆಪಿ ಹೈಕಮಾಂಡ್ ತಾಲೂಕಿನ ರಾಜಕಾರಣ ಹಾಗೂ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಈ ಒಬ್ಬರು ಸದಸ್ಯರಲ್ಲಿಯೇ ಒಬ್ಬರನ್ನು ಆಯ್ಕೆ ಮಾಡುತ್ತಾ? ಅಥವಾ ಅಚ್ಚರಿಯ ಸದಸ್ಯರನ್ನು ಪುರಸಭೆ ಅಧ್ಯಕ್ಷ ಗಾದಿಗೆ ಆರಿಸುತ್ತಾ? ಎಂಬುದಕ್ಕೆ ಕ್ಷಣಗಣನೆ ಆರಂಭವಾಗಿದೆ.

ಗಜೇಂದ್ರಗಡ ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರಕ್ಕೆ ಸದಸ್ಯರು ಬದ್ಧವಾಗಿದ್ದೇವೆ ಎಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಿಳಿಸಿದ್ದಾರೆ.

Share this article