ಧಾರವಾಡ:
ಕಾರ್ಯಾಗಾರ ಉದ್ಘಾಟಿಸಿದ ಮುಖ್ಯಶಿಕ್ಷಕಿ ದೀಪಾ ನಾಯಕ, ಯುವ ಜನಾಂಗಕ್ಕೆ ನೀರಿನ ಮಹತ್ವ ತಿಳಿಸುವ ಕಾರ್ಯವಾಗಬೇಕಿದೆ. ಜಲ ಮತ್ತು ನೆಲದ ವ್ಯವಸ್ಥಿತ ನಿರ್ವಹಣೆ ಕುರಿತು ವಾಲ್ಮಿ ಸಂಸ್ಥೆಯು ನೀಡುವ ತರಬೇತಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ಗಿರೀಶ ಮರಡ್ಡಿ, ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವ ಒತ್ತಡದಿಂದ ನೆಲ ಮತ್ತು ಜಲ ಸಂಪನ್ಮೂಲಗಳ ಮೇಲೆ ಅಪಾರ ಒತ್ತಡ ಉಂಟಾಗಿದೆ. ಅಧಿಕ ಇಳುವರಿಯ ಉದ್ದೇಶದಿಂದ ಅತಿಯಾದ ರಾಸಾಯನಿಕಗಳ ಬಳಕೆ ಮಾಡುತ್ತಿರುವುದು ಮಣ್ಣು ಮತ್ತು ನೀರಿನ ಮಾಲಿನ್ಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿ ಹಾಗೂ ಪಶುಸಂಗೋಪನೆ, ಗಿಡ-ಮರಗಳನ್ನು ಆಧರಿಸಿದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ, ತಾಂತ್ರಿಕ ಜ್ಞಾನ ಮತ್ತು ಮೌಲ್ಯವರ್ಧನೆಯ ವಿಧಾನಗಳನ್ನು ರೈತರು ಅಳವಡಿಸಿಕೊಂಡಾಗ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯ ಎಂದರು.ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಮಾತ್ರ ಒದಗಿಸುವ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಸಮೃದ್ಧ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ವಿಷಮುಕ್ತ ಆಹಾರ ಉತ್ಪಾದನೆಗೆ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಜಲ ಮತ್ತು ನೆಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಮತ್ತು ನಾಗರಿಕನ ಕರ್ತವ್ಯ ಎಂದು ಹೇಳಿದರು.