ಗೋಕರ್ಣ : ಗಂಗಾವಳಿ ಕಡಲ ತೀರದಲ್ಲಿ ಅರಣ್ಯ ಇಲಾಖೆಯಿಂದ ಆಮೆ ಮೊಟ್ಟೆ ಸಂರಕ್ಷಣೆ - 45 ದಿನಗಳ ಕಾಲ ಇಲಾಖೆ ನಿಗಾ

KannadaprabhaNewsNetwork | Updated : Jan 03 2025, 12:48 PM IST

ಸಾರಾಂಶ

ನೂತನ ವರ್ಷದ ಮೊದಲು ಗೂಡು ಇದಾಗಿದ್ದು, ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಮೊಟ್ಟೆ ಇಡುತ್ತಿರುವುದು ಪತ್ತೆಯಾಗಿದೆ.

ಗೋಕರ್ಣ: ಇಲ್ಲಿನ ಗಂಗಾವಳಿ ಕಡಲತೀರದಲ್ಲಿ ಬುಧವಾರ ರಾತ್ರಿ ಆಮೆ ಇಟ್ಟಿದ್ದು, ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ. ನೂತನ ವರ್ಷದ ಮೊದಲು ಗೂಡು ಇದಾಗಿದ್ದು, ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಮೊಟ್ಟೆ ಇಡುತ್ತಿರುವುದು ಪತ್ತೆಯಾಗಿದೆ. ಈ ಗೂಡಿನ ಸುತ್ತ ಬೇಲಿ ನಿರ್ಮಿಸಿ ಪ್ರಾಣಿಗಳು ಬರದಂತೆ ರಕ್ಷಣೆ ಮಾಡಲಾಗಿದೆ. 

ಮರಿ ಹೊರಬರಲು ಬೇಕಾಗುವ ಒಟ್ಟು 45 ದಿನಗಳ ಕಾಲ ಇಲಾಖೆ ನಿಗಾ ವಹಿಸಲಿದೆ.ಈ ವರ್ಷ ಈವರೆಗೆ ಒಟ್ಟು 12  ಆಮೆ ಮೊಟ್ಟೆಯ ಗೂಡು ದೊರೆತಿದ್ದು, 1039 ಮೊಟ್ಟೆ ಸಂರಕ್ಷಿಸಲಾಗಿದೆ. ಆಮೆ ಸಂರಕ್ಷಣಾ ಕೇಂದ್ರ ಹಾಗೂ ಇದರ ಹತ್ತಿರದಲ್ಲಿ ಮೊಟ್ಟೆ ಇಟ್ಟರೆ ಅಲ್ಲಿಯೇ ಬೇಲಿ ನಿರ್ಮಿಸಿ ಕಡಲ ಜೀವಿಯ ಬಾಣಂತನಕ್ಕೆ ಅರಣ್ಯ ಇಲಾಖೆಯವರು ಸಹಕಾರ ನೀಡುತ್ತಿದ್ದಾರೆ.

ಕಾಡುಹಂದಿ ದಾಳಿ: ಮೂವರು ರೈತರಿಗೆ ಗಾಯ

ಯಲ್ಲಾಪುರ: ಕಾಡುಹಂದಿ ದಾಳಿಯಿಂದ ಮೂವರು ರೈತರು ಗಾಯಗೊಂಡಿರುವ ಘಟನೆ ತಾಲೂಕಿನ ಹೆಮ್ಮಾಡಿಯಲ್ಲಿ ಜ. 1ರ ರಾತ್ರಿ ನಡೆದಿದೆ.ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಐವರು ರೈತರು ಮನೆಗೆ ಮರಳುತ್ತಿದ್ದ ವೇಳೆ ಹಂದಿ ದಾಳಿ ಮಾಡಿದೆ. ಘಟನೆಯಲ್ಲಿ ಗಂಗಾಧರ ಮಡಿವಾಳ, ನಿತ್ಯಾನಂದ ಗೌಡ ಹಾಗೂ ಪಾಂಡುರಂಗ ಮಡಿವಾಳರ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಗಂಗಾಧರ ಮಡಿವಾಳ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ವಿಷಯ ತಿಳಿದ ತಕ್ಷಣ ಮಂಚಿಕೇರಿ ಆರ್‌ಎಫ್ಒ ಬಸವರಾಜ ಬೋಚಳ್ಳಿ, ಡಿಆರ್‌ಎಫ್‌ಒ ಬೀರಪ್ಪ, ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ಅರಣ್ಯ ಇಲಾಖೆಯವರು ಪರಿಹಾರಧನ ವಿತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಲಿಸುತ್ತಿದ್ದ ಬೈಕ್‌ಗೆ ಬೆಂಕಿ: ಸವಾರ ಪಾರು

ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ಗುರುವಾರ ಚಲಿಸುತ್ತಿದ್ದ ಬೈಕ್‌ನಲ್ಲಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಸವಾರ ಉತ್ತರ ಪ್ರದೇಶ ಮೂಲದವರಾಗಿದ್ದು, ಮುರ್ಡೇಶ್ವರದಿಂದ ಗೋವಾದತ್ತ ತೆರಳುತ್ತಿದ್ದರು. ಈ ವೇಳೆ ಅಮದಳ್ಳಿ ಹತ್ತಿರ ಚಲಿಸುತ್ತಿರುವಾಗಲೇ ಬೈಕ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಬೈಕನ್ನು ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಿ ಸವಾರ ಇಳಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸಿಬ್ಬಂದಿ ಆಗಮಿಸುವ ವೇಳೆಗೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.

Share this article