ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಅಳಿವು ಉಳಿವಿನ ಪ್ರಶ್ನೆ: ಡಾ. ಸಮದ್ ಕೊಟ್ಟೂರು

KannadaprabhaNewsNetwork |  
Published : Jan 22, 2026, 02:30 AM IST
21ಎಸ್.ಎನ್.ಡಿ.01ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ಪ್ರೊ. ಮಾಧವ ಗಾಡ್ಗೀಳ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.   | Kannada Prabha

ಸಾರಾಂಶ

ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಹಿರಿಯ ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಅಭಿಪ್ರಾಯಪಟ್ಟರು.

ಸಂಡೂರು: ಪ್ರೊ. ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಜೀವವೈವಿದ್ಯ ತಾಣ ಎಂದು ಗುರುತಿಸಿದ್ದರು. ಬಳ್ಳಾರಿ, ವಿಜಯನಗರ ಸೇರಿದಂತೆ ಬಯಲು ಸೀಮೆಯ ಜನರ ಜೀವನಾಡಿಯಾಗಿರುವ ತುಂಗಭದ್ರಾ ನದಿ ಹುಟ್ಟುವುದು ಪಶ್ಚಿಮ ಘಟ್ಟಗಳಲ್ಲಿ. ಅಲ್ಲಿನ ಕಾಡು ನಾಶವಾದರೆ ಇಲ್ಲಿ ನಮಗೆ ಭೀಕರ ಪರಿಣಾಮ ಉಂಟಾಗುತ್ತದೆ. ಹೀಗಾಗಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಅಳಿವು-ಉಳಿವಿನ ಪ್ರಶ್ನೆಯಾಗಿದೆ ಎಂದು ಹಿರಿಯ ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಅಭಿಪ್ರಾಯಪಟ್ಟರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಜನ ಸಂಗ್ರಾಮ ಪರಿಷತ್, ಬಳ್ಳಾರಿ ಸಹಯೋಗದಲ್ಲಿ ಪರಿಸರ ವಿಜ್ಞಾನಿ ಪ್ರೊ. ಮಾಧವ ಗಾಡ್ಗೀಳ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪ್ರೊ. ಮಾಧವ ಗಾಡ್ಗೀಳ್ ಅವರು ನದಿ ಮೂಲದಲ್ಲಿ ನಡೆಯುವ ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳು ಬಯಲು ಸೀಮೆಯ ಕೃಷಿ ಮತ್ತು ಕುಡಿಯುವ ನೀರಿನ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ ಎಂದು ಎಚ್ಚರಿಸಿದ್ದರು. ಇದೇ ವೇಳೆ ಮಾಧವ ಗಾಡ್ಗೀಳ್ ಅವರ ಒಡನಾಟವನ್ನು ಸ್ಮರಿಸಿದ ಅವರು, 2014ರಲ್ಲಿ ಸಂಡೂರಿಗೆ ಭೇಟಿ ನೀಡಿದ್ದ ಗಾಡ್ಗೀಳ್ ಅವರು ಇಲ್ಲಿನ ಪರಿಸರ ವೈವಿಧ್ಯತೆಯ ಸಂರಕ್ಷಣೆಯ ಮಹತ್ವ ಬಗ್ಗೆ ಅಂದೇ ಗಮನ ಸೆಳೆದಿದ್ದರು ಎಂದರು.

ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ. ಶಿವಕುಮಾರ್ ಮಾತನಾಡಿ, ಪಶ್ಚಿಮ ಘಟ್ಟಗಳು ಕೇವಲ ಪ್ರವಾಸಿ ತಾಣಗಳಲ್ಲ. ಅವು ಬಯಲು ಸೀಮೆಯ ನೀರಿನ ತೊಟ್ಟಿಗಳು. ನಮ್ಮ ನಾಳೆಯ ಬದುಕು ಹಸನಾಗಿರಬೇಕಾದರೆ ಮತ್ತು ನೀರಿನ ಮೂಲಗಳು ಬತ್ತದಿರಬೇಕಾದರೆ ಪಶ್ಚಿಮ ಘಟ್ಟಗಳ ಸಂರಕ್ಷಣೆ ಅನಿವಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಬಿ. ರವಿ ಮಾತನಾಡಿ, ಪರಿಸರ ಪ್ರವಾದಿ ಎಂದು ಹೆಸರಾದ ಗಾಡ್ಗೀಳ್ ಅವರ ಅಗಲುವಿಕೆಯಿಂದ ಇಡೀ ಸಹ್ಯಾದ್ರಿ ಪರ್ವತ ಶ್ರೇಣಿಯೇ ಮೌನವಾಗಿ ರೋಧಿಸುತ್ತಿದೆ. ಅಮೇರಿಕಾದ ಹಾರ್ವಡ್‌ ನಲ್ಲಿದ್ದ ಐಶಾರಾಮಿ ಬದುಕನ್ನು ತ್ಯಜಿಸಿ, ಭಾರತದ ಪರಿಸರ ರಕ್ಷಣೆಗೆ ಜೀವನ ಮುಡಿಪಾಗಿಟ್ಟ ಪ್ರೊ. ಮಾಧವ ಗಾಡ್ಗೀಳ್ ಅವರ ನಿಸ್ವಾರ್ಥ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ. ವಿದ್ಯಾರ್ಥಿಗಳು ಗಾಡ್ಗೀಳ್ ಅವರ ವೈಜ್ಞಾನಿಕ ದೃಷ್ಟಿಕೋನ ಮತ್ತು ಪರಿಸರ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಖನಿಜ ಸಂಸ್ಕರಣಾ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಶಿಧರ ಉಪಸ್ಥಿತರಿದ್ದರು. ಶ್ರೀಶೈಲ ಆಲ್ದಳ್ಳಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕ ಡಾ. ಮಲ್ಲಯ್ಯ ಸ್ವಾಗತಿಸಿದರು. ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮಪ್ಪ ರಾಗಿ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸದಾನಂದ ಹೆಗ್ಗಡಾಳ್‌ಮಠ, ವಿನಾಯಕ ಮುದೇನೂರು, ಈರಣ್ಣ ಮೂಲಿಮನೆ, ಕಲೀಂ, ಟಿ.ಕೆ. ಮಂಜುನಾಥ ಸೇರಿದಂತೆ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌