ಅಧಿಕಾರವನ್ನು ಸೇವೆ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : Apr 23, 2025 12:34 AM

ಸಾರಾಂಶ

ಎಲ್ಲರೂ ಸರ್ಕಾರಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಪುಣ್ಯವಂತರೇ. ನಾವ್ಯಾರೂ ಉಚಿತವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿಲ್ಲ. ನಮಗೆ ಸರ್ಕಾರ ವೇತನ ನೀಡುತ್ತಿದೆ. ಆದ್ದರಿಂದ ಪ್ರಾಮಾಣಿಕತೆ, ಪರಿಶುದ್ಧತೆ, ಆತ್ಮಸಾಕ್ಷಿ ಹಾಗೂ ಮನಃ ಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಧಿಕಾರಿಗಳು ಅಧಿಕಾರವನ್ನು ಆಳ್ವಿಕೆ ಎಂದು ಭಾವಿಸದೆ ಸೇವೆ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸೇವಾ ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯಾವುದೇ ಯೋಜನೆ ಜಾರಿಗೆ ತರಲು ಸರ್ಕಾರಿ ನೌಕರರ ಕೆಲಸದ ಮಹತ್ವ ದೊಡ್ಡದು ಎಂದರು.

ಎಲ್ಲರೂ ಸರ್ಕಾರಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಪುಣ್ಯವಂತರೇ. ನಾವ್ಯಾರೂ ಉಚಿತವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿಲ್ಲ. ನಮಗೆ ಸರ್ಕಾರ ವೇತನ ನೀಡುತ್ತಿದೆ. ಆದ್ದರಿಂದ ಪ್ರಾಮಾಣಿಕತೆ, ಪರಿಶುದ್ಧತೆ, ಆತ್ಮಸಾಕ್ಷಿ ಹಾಗೂ ಮನಃ ಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

2023ನೇ ಸಾಲಿನ ಸೇವಾ ಸರ್ವೊತಮ ಪ್ರಶಸ್ತಿಯನ್ನು 2024ರಲ್ಲಿ ನೀಡಬೇಕಾಗಿತ್ತು. ಆದರೆ, ಕಾರಣಾಂತರದಿಂದ ಇಂದು ನೀಡುತ್ತಿದ್ದೇವೆ. 2024 ಮತ್ತು 2025ನೇ ಸಾಲಿನ ಪ್ರಶಸ್ತಿಯನ್ನು ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಪ್ರಶಸ್ತಿ ಪ್ರಕ್ರಿಯೆಗೆ ಆನ್ ಲೈನ್ ಮೂಲಕ ಅರ್ಜಿ ಪ್ರಾರಂಭಿಸಿದಾಗ ಎಲ್ಲ ಸರ್ಕಾರಿ ನೌಕರರು ಅರ್ಜಿ ಸಲ್ಲಿಸುವುದು ಸೂಕ್ತ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಪಾಟೀಲ್ ಮೊದಲನೇ ಭಾರತೀಯ ನಾಗರೀಕ ಸೇವಾ ಅಧಿಕಾರಿಗಳಿಗೆ ಭಾಷಣ ನೀಡಿದ ಏಪ್ರಿಲ್ 21ರ ದಿನವನ್ನು ನಾಗರೀಕ ಸೇವಾ ದಿನಾಚರಣೆಯಾಗಿ ಆಚರಿಸುತ್ತೇವೆ. ಅದೇ ಕಾರಣಕ್ಕಾಗಿ ಇಂದು ಸೇವಾ ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ಜಿಲ್ಲಾ ಸೇವಾ ಸರ್ವೊತಮ ಪ್ರಶಸ್ತಿ ಆಯ್ಕೆಯಾದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಂ. ಬಾಲಸುಬ್ರಹ್ಮಣ್ಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ, ಪಾಂಡವಪುರ ಉಪವಿಭಾಗ ಉಪ ಕೃಷಿ ನಿರ್ದೇಶಕಿ ಎಚ್.ಎನ್.ಮಮತಾ, ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಶ್, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಶಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸಮೂರ್ತಿ ಎಂ.ಆರ್., ಜಿಲ್ಲಾಧಿಕಾರಿಗಳ ಕಚೇರಿ ಕಂದಾಯ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಎಂ.ಕೆ.ಕಿಶೋರ್, ಗ್ರಾಮ ಆಡಳಿತ ಅಧಿಕಾರಿ ಮಂಜುಳಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಾಹನ ಚಾಲಕ ಪಿ.ಶ್ರೀಧರ್ ಹಾಗೂ ಕಂದಾಯ ಇಲಾಖೆ ವಾಹನ ಚಾಲಕ ಜೋಸೆಫ್ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿಗಳಾದ ಶ್ರೀನಿವಾಸ್ ಮತ್ತು ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಉಮ್ಮಡಹಳ್ಳಿ ಪಿಡಿಒ ಮಂಜುನಾಥ್‌ಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರದಿಂದ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಮಂಜುನಾಥ್ ಅವರಿಗೆ 2023ನೇ ಸಾಲಿನ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಬ್ಯಾಂಕ್ಟೆಟ್ ಹಾಲ್‌ನಲ್ಲಿ ಪ್ರದಾನ ಮಾಡಿದರು.

ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಯಲ್ಲಿ ಸಾರ್ಥಕತೆಯನ್ನು ಮಂಜುನಾಥ್ ಕಂಡುಕೊಂಡಿದ್ದಾರೆ. ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸರ್ಕಾರದಿಂದ ಕೈಗೊಂಡ ಯೋಜನೆಗಳು ಮತ್ತು ಸಲ್ಲಿಸಿದ ಅತ್ಯುತ್ತಮ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿದೆ. ಕೆ.ಮಂಜುನಾಥ್ ಅವರಿಗೆ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಲಭಿಸಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಅಭಿನಂದನೆ ಸಲ್ಲಿಸಿದೆ.

Share this article