ಈಶ್ವರಪ್ಪ ಅಲ್ಲ, ಬೆಂಬಲಿಗರೇ ಅಭ್ಯರ್ಥಿ ಎಂದುಕೊಳ್ಳಿ

KannadaprabhaNewsNetwork | Published : Mar 21, 2024 1:01 AM

ಸಾರಾಂಶ

ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್‌, ವಾರ್ಡ್‌ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್‌. ಈಶ್ವರಪ್ಪ ಶಿವಮೊಗ್ಗದಲ್ಲಿ ಬೆಂಬಲಿಗರಲ್ಲಿ ವಿನಂತಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಭಿಮಾನಿಗಳು ಮತ್ತು ಬೆಂಬಲಿಗರಾದ ನೀವು ಈಗಿನಿಂದಲೇ ಪ್ರತಿ ಬೂತ್‌, ವಾರ್ಡ್‌ಗಳಲ್ಲಿ ನೀವೇ ಸ್ಪರ್ಧಿ ಎಂದು ಭಾವಿಸಿ, ಚುನಾವಣಾ ಪ್ರಚಾರ ನಡೆಸಿ, ಈಶ್ವರಪ್ಪನವರನ್ನು ಗೆಲ್ಲಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ, ಬಿಜೆಪಿ ಪ್ರಮುಖ ಕೆ.ಎಸ್‌. ಈಶ್ವರಪ್ಪ ತಮ್ಮ ಬೆಂಬಲಿಗರಲ್ಲಿ ವಿನಂತಿಸಿದರು.

ತಮ್ಮ ಮನೆಯಂಗಳದಲ್ಲಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿರುವ ಅನೇಕರು ಮುಂದಿನ ದಿನಗಳಲ್ಲಿ ನಗರಪಾಲಿಕೆ, ನಗರಸಭೆ, ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದೀರಿ. ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದರು.

ಯಾರೇ ಬಂದು ನನ್ನ ಮನವೊಲಿಸುವ ಪ್ರಯತ್ನ ನಡೆಸಿದರೂ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಯಾವುದೇ ಎಂಪಿ, ಶಾಸಕ ಸ್ಥಾನದ ಆಕಾಂಕ್ಷಿಯಲ್ಲ. ಅಧಿಕಾರದ ಆಸೆಯಿಲ್ಲ. ಈಗಲೂ ಮೋದಿ ನನ್ನ ದೇವರು. ಬಿಜೆಪಿ ನನ್ನ ತಾಯಿ. ಆದರೆ, ಪಕ್ಷವನ್ನು ಕುಟುಂಬದ ಹಿಡಿತದಿಂದ, ಸರ್ವಾಧಿಕಾರಿ ಧೋರಣೆಯಿಂದ ಬಿಡಿಸಬೇಕು ಎಂಬ ಕಾರಣಕ್ಕೆ ನಾನು ಸ್ಪರ್ಧಿಸುತ್ತಿದ್ದೇನೆ. ಯಡಿಯೂರಪ್ಪ ಕುಟುಂಬದ ರಾಘವೇಂದ್ರ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆಯೇ ಹೊರತು, ಬಿಜೆಪಿಯ ವಿರುದ್ಧ ಅಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಯಲ್ಲಿಯೇ ಇರುತ್ತೇನೆ ಎಂದರು.

ನಾನು ಸಿಗಂದೂರು ಶ್ರೀ ಕ್ಷೇತ್ರಕ್ಕೆ ಹೋಗಿದ್ದೆ. ಅಲ್ಲಿನ ಧರ್ಮದರ್ಶಿ ರಾಮಪ್ಪನವರು ವಿಶೇಷ ಆಸಕ್ತಿ ತೋರಿಸಿ, ನನ್ನನ್ನು ಬರಮಾಡಿಕೊಂಡರು. ಗರ್ಭಗುಡಿವರೆಗೆ ಕರೆದುಕೊಂಡು ಹೋಗಿ, ದೇವಿಯ ದರ್ಶನ ಮಾಡಿಸಿದರು. ಹಿಂದೂ ಭಕ್ತನೊಬ್ಬನನ್ನು ಗೆಲ್ಲಿಸಬೇಕು ಎಂದು ನನ್ನ ಪರವಾಗಿ ರಾಮಪ್ಪನವರೇ ದೇವಿಯನ್ನು ಪ್ರಾರ್ಥಿಸಿದ್ದಾರೆ ಎಂದು ಹೇಳಿದರು.

ತಂದೆ ಯಾರಿಗೂ ಅನ್ಯಾಯ ಮಾಡಿಲ್ಲ:

ಈಶ್ವರಪ್ಪ ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ತಂದೆಯವರು ಈಗ ಕೈಗೊಂಡಿರುವ ನಿಲುವಿನಿಂದ ಹಿಂದಕ್ಕೆ ಸರಿಯುವುದಿಲ್ಲ. ಅವರು 40 ವರ್ಷ ರಾಜಕಾರಣ ಮಾಡಿದ್ದಾರೆ. ಇಷ್ಟು ಸುದೀರ್ಘ ಅವಧಿಯಲ್ಲಿ ಯಾರಿಗಾದರೂ ಅನ್ಯಾಯ ಮಾಡಿದ್ದಾರೆಯೇ? ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಇವರ ಜೊತೆಗೆ ನಾನು ಕೂಡ ಸಮಾಜದ ಅಳಿಲು ಸೇವೆ ಮಾಡುತ್ತ ಬಂದಿದ್ದೇನೆ. ನೀವು ಇದುವರೆಗೆ ನಮಗೆ ಬೆಂಬಲ ನೀಡಿದ್ದೀರಿ. ನಮ್ಮ ಕುಟುಂಬ ನಿಮ್ಮ ಜೊತೆ ಇರುತ್ತದೆ. ನಿಮ್ಮ ಋಣ ತೀರಿಸುತ್ತೇವೆ. ಎಂದರು.

ಹಿಂದುತ್ವದ ಕಾರಣಕ್ಕಾಗಿಯೇ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಗಾಗಲೇ ನಿರ್ಧಾರವು ಆಗಿದೆ. ಪಕ್ಷ ಉಳಿಯಬೇಕು ಎಂಬುವುದು ಎಲ್ಲರ ಆಶಯವಾಗಿದೆ. ಅವರ ಆಶಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಲತಾ ಗಣೇಶ್, ಸುವರ್ಣ ಶಂಕರ್, ಶಿವಕುಮಾರ್, ಮಾಜಿ ಉಪ ಮೇಯರ್‌ಗಳಾದ ಗನ್ನಿ ಶಂಕರ್, ಲಕ್ಷ್ಮೀ ಶಂಕರ ನಾಯ್ಕ್, ಮಹಾನಗರ ಪಾಲಿಕೆಯ 14 ಮಾಜಿ ಸದಸ್ಯರು, ನಾಲ್ಕು ಮಂದಿ ನಾಮನಿರ್ದೇಶಿತ ಸದಸ್ಯರು ಭಾಗಿಯಾಗಿದ್ದರು. ಪ್ರಮುಖರಾದ ಉಮಾ, ಭೂಪಾಲ್, ಕೇಬಲ್ ಬಾಬು ಸೇರಿದಂತೆ 200 ಜನರು ಭಾಗವಹಿಸಿದ್ದರು. ಇನ್ನೂ ಎರಡ್ಮೂರು ಮಂದಿ ಪಾಲಿಕೆ ಸದಸ್ಯರು ಜೊತೆಗೆ ಸೇರಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

- - - ಬಾಕ್ಸ್-1 * ಬಿಜೆಪಿ ಕಚೇರಿಗೆ ಹೋಗದಿರಲು ಬೆಂಬಲಿಗರ ನಿರ್ಧಾರ ಈಶ್ವರಪ್ಪ ಜೊತೆಗೆ ಗುರುತಿಸಿಕೊಂಡ ಬೆಂಬಲಿಗರು ಇನ್ನು ಮುಂದೆ ಯಾರೂ ಬಿಜೆಪಿ ಕಚೇರಿಗೆ ಹೋಗಬಾರದು ಎಂದು ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರದವರೆಗೂ ಬಿಜೆಪಿ ಕಚೇರಿಗೆ ಬೆಂಬಲಿಗರು ಹೋಗಿದ್ದರು. ಆದರೆ, ಈ ನಿರ್ಧಾರ ಪ್ರಕಟ ಆಗುತ್ತಿದ್ದಂತೆ ಬಿಜೆಪಿ ಕಚೇರಿಯಿಂದ ಪ್ರಮುಖರಿಗೆ ಕರೆ ಬರಲಾರಂಭಿಸಿದೆ ಎಂದು ಬೆಂಬಲಿಗರು ತಿಳಿಸಿದ್ದು, ನಾವು ಯಾವ ಕಾರಣಕ್ಕೂ ಸಧ್ಯಕ್ಕೆ ಅಲ್ಲಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

- - - ಬಾಕ್ಸ್-2

* ಪ್ರತಿ ವಾರ್ಡ್, ತಾಲೂಕು ಕಮಿಟಿ ರಚಿಸಲು ನಿರ್ಧಾರ ಶಿವಮೊಗ್ಗ: ಬಿಜೆಪಿ ಬೆಂಬಲಿಗರ ಪ್ರತಿ ವಾರ್ಡ್ ಮತ್ತು ತಾಲೂಕು ಕಮಿಟಿ ರಚಿಸಲು ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲಿಗೆ ಶಿವಮೊಗ್ಗ ನಗರದಲ್ಲಿ ವಾರ್ಡ್ ಸಮಿತಿ ರಚಿಸಲಾಗುತ್ತದೆ. ಬಳಿಕ ತಾಲೂಕು ಮಟ್ಟದ ಸಮಿತಿಗಳ ರಚನೆಯಾಗುತ್ತದೆ ಎಂದು ಬೆಂಬಲಿಗರು ತಿಳಿಸಿದ್ದಾರೆ.

- - -

ಬಾಕ್ಸ್-3 ಚುನಾವಣೆ ಪ್ರಚಾರ ಸಭೆ 26ಕ್ಕೆ ಶಿವಮೊಗ್ಗ: ಮಾ.26ರಂದು ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ತಮ್ಮ ಚುನಾವಣಾ ಪ್ರಚಾರ ಸಭೆ ಆರಂಭಿಸಲಿದ್ದಾರೆ. ಅಂದು ಎಲ್ಲ ವಾರ್ಡ್‌ಗಳ ಪ್ರಮುಖರು ಸೇರಿ ಈ ಪ್ರಚಾರ ಕಾರ್ಯ ಆರಂಭಿಸಲಿದ್ದೇವೆ. ಬಳಿಕ ಇದನ್ನು ಇಡೀ ಕ್ಷೇತ್ರಕ್ಕೆ ವಿಸ್ತರಿಸಲಿದ್ದೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

- - - ಬಾಕ್ಸ್-4

* ಚುನಾವಣೆ ಬಳಿಕ ವಿಜಯೇಂದ್ರ ರಾಜೀನಾಮೆ

ಶಿವಮೊಗ್ಗ: ಲೋಕಸಭಾ ಚುನಾವಣೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಖಂಡಿತ ಆಗಲಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶಿವಮೊಗ್ಗದ ತಮ್ಮ ಮನೆಯಂಗಳದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಠಕ್ಕೆ ಬಿದ್ದು ಆರು ತಿಂಗಳು ರಾಜ್ಯಾಧ್ಯಕ್ಷರ ಹುದ್ದೆಯನ್ನು ಖಾಲಿ ಇರಿಸಿ, ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಸಿದರು. ಅವರ ಹಿಂದೆ ಇಡೀ ಲಿಂಗಾಯಿತರು ಇದ್ದಾರೆ, ಬಹಳ ಪ್ರಬಲ ಎಂದು ರಾಷ್ಟ್ರೀಯ ನಾಯಕರು ನಂಬುವಂತೆ ಮಾಡಿದ್ದಾರೆ. ಆದರೆ ಚುನಾವಣೆ ಬಳಿಕ ಇವರ ಶಕ್ತಿ ಏನೆಂದು ಗೊತ್ತಾಗುತ್ತದೆ. ಆ ಬಳಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯಿತರೇ ಬೇಕು ಎಂದಾಗಿದ್ದಾರೆ ಬಸವನಗೌಡ ಯತ್ನಾಳ್‌ ಇದ್ದರು. ಒಕ್ಕಲಿಗರು ಬೇಕೆಂದರೆ ಸಿ.ಟಿ. ರವಿ, ಹಿಂದುಳಿದವರು ಎಂದಾದರೇ ನಾನೇ ಇದ್ದೆ. ಆದರೆ, ತಮ್ಮ ಪುತ್ರನೇ ಆಗಬೇಕೆಂದು ಹಠ ಹಿಡಿದು ಆ ಸ್ಥಾನ ಪಡೆದರು ಎಂದು ಆರೋಪಿಸಿದರು.

- - - -ಫೋಟೋ:

ಶಿವಮೊಗ್ಗದ ಮಲ್ಲೇಶ್ವರ ನಗರದ ತಮ್ಮ ಮನೆಯಲ್ಲಿ ಕರೆಯಲಾಗಿದ್ದ ಬೆಂಬಲಿಗರ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಮಾತನಾಡಿದರು.

Share this article