ಬೆಂಗಳೂರು : ಮುಂಬರುವ ನಮ್ಮ ಮೆಟ್ರೋ ‘ನೀಲಿ’ ಮಾರ್ಗದ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಲಗೇಜ್ ರ್‍ಯಾಕ್ ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಈ ಮಾರ್ಗ ರೇಷ್ಮೆ ಮಂಡಳಿ-ಕೆ.ಆರ್.ಪುರ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿದ್ದು, ಮುಂಬರುವ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲಿನ ಪ್ರತಿ ಬೋಗಿಯ ಎರಡು ತುದಿಗಳಲ್ಲಿ ರ್‍ಯಾಕ್ ಇರಲಿದೆ.
ಸದ್ಯ ಮೆಟ್ರೋ ರೈಲುಗಳಲ್ಲಿ ಲಗೇಜ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. ರ್‍ಯಾಕ್ ಮಾಡಬೇಕಿದ್ದ ಸ್ಥಳದಲ್ಲಿ ಇಬ್ಬರು ಕಳಿತುಕೊಳ್ಳುವಷ್ಟು ಆಸನದ ವ್ಯವಸ್ಥೆ ಇದೆ. ಇದರಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಬ್ಯಾಗ್ ಹೊರತುಪಡಿಸಿ ಹೆಚ್ಚಿನ ಲಗೇಜ್ ಇಟ್ಟುಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಪರಿಗಣಿಸಿ ಈ ರ್‍ಯಾಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ವಿಶೇಷವಾಗಿ ವಿಮಾನ ಪ್ರಯಾಣಿಕ ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಈಗ 60 ಸೆಮೀ ಉದ್ದ, 45 ಸೆಮೀ ಅಗಲ ಮತ್ತು 25 ಸೆಮೀ ಎತ್ತರದ ಬ್ಯಾಗ್‌ಗಳಲ್ಲಿ ಗರಿಷ್ಠ 15 ಕೆಜಿ ತೂಕದ ವಸ್ತುಗಳನ್ನು ಉಚಿತವಾಗಿ ಒಯ್ಯಬಹುದು. ಒಬ್ಬರು ಇಂಥ ಒಂದು ಬ್ಯಾಗ್ ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಅದಕ್ಕಿಂತ ಭಾರದ ಮತ್ತು ಹೆಚ್ಚಿನ ಬ್ಯಾಗ್ ಇದ್ದಲ್ಲಿ ₹30 ಶುಲ್ಕ ನೀಡಬೇಕು. ಶುಲ್ಕ ಪಾವತಿಸದವರಿಗೆ ₹250 ದಂಡ ವಿಧಿಸಲಾಗುತ್ತಿದೆ.
2019-2023ರ ಅವಧಿಯಲ್ಲಿ ದೊಡ್ಡ ಗಾತ್ರದ ಲಗೇಜ್‌ನಿಂದ ₹1.17 ಕೋಟಿ ದಂಡ ಸಂಗ್ರಹಿಸಿದೆ. ಬಸ್ ಮತ್ತು ರೈಲು ನಿಲ್ದಾಣ ಸಂಪರ್ಕಿಸುವ ಮೆಟ್ರೋ ಮಾರ್ಗದಲ್ಲೇ ಹೆಚ್ಚು ದಂಡ ವಸೂಲಿಯಾಗಿದೆ. ಯಶವಂತಪುರ, ಚಿಕ್ಕಪೇಟೆ, ಕೆಂಪೇಗೌಡ, ಬೈಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿ ನಿಲ್ದಾಣ ಮೆಟ್ರೋ ಮಾರ್ಗದಲ್ಲಿ ಲಗೇಜ್ ದಂಡ ಸಂಗ್ರಹವಾಗಿದೆ.
ಪ್ರಮುಖ ಮೆಟ್ರೋ ನಿಲ್ದಾಣದಲ್ಲಿ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಕಲ್ಪಿಸಲಾಗಿದೆ. ಮೆಜೆಸ್ಟಿಕ್, ಚಿಕ್ಕಪೇಟೆ, ಬೆನ್ನಿಗಾನಹಳ್ಳಿ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ.
ಹಳದಿ ಮಾರ್ಗದ ಮೆಟ್ರೋಗೆ ಮುಂದಿನ ವಾರ 5ನೇ ರೈಲು?
ನಮ್ಮ ಮೆಟ್ರೋ ಹಳದಿ ಮಾರ್ಗದ ಐದನೇ ರೈಲು ಮುಂದಿನ ವಾರದಿಂದ ಕಾರ್ಯಾಚರಣೆ ಆಗುವ ಸಾಧ್ಯತೆಯಿದೆ. ಎಲ್ಲ ಆರು ಬೋಗಿಗಳು ಹೆಬ್ಬಗೋಡಿ ಡಿಪೋದಲ್ಲಿ ಜೋಡಣೆಯಾಗಿದ್ದು, ಪ್ರಾಯೋಗಿಕ ಸಂಚಾರಕ್ಕೆ ಸಿದ್ಧಗೊಂಡಿವೆ. ಇದಾದ ಬಳಿಕ ವಾಣಿಜ್ಯ ಸಂಚಾರಕ್ಕೆ ಬರಲಿದೆ. ಸದ್ಯ ಆರ್.ವಿ.ರಸ್ತೆ - ಬೊಮ್ಮಸಂದ್ರ ಮಾರ್ಗದಲ್ಲಿ ಪ್ರತಿ 19 ನಿಮಿಷಕ್ಕೊಂದು ರೈಲು ಪ್ರಯಾಣಿಕರ ಸೇವೆಗೆ ಲಭ್ಯವಿದೆ. 5ನೇ ರೈಲು ಸಂಚಾರ ಆರಂಭಿಸಿದ ಬಳಿಕ ಪ್ರತಿ 13-15 ನಿಮಿಷಕ್ಕೆ ಒಂದು ರೈಲು ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.